ಬೆಂಗಳೂರು: ಕೋವಿಡ್ ಲಸಿಕೆ ನೀಡಿಕೆ ಗುರಿ ತಲುಪುವ ಉದ್ದೇಶದಿಂದ ಪಾಲಿಕೆ ಅರೋಗ್ಯ ಸಿಬ್ಬಂದಿ 8 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೂ ಜ.23ರಂದು ಎರಡನೇ ಡೋಸ್ ಲಸಿಕೆ ನೀಡಿರುವುದಾಗಿ ಮೊಬೈಲ್ಫೋನ್ಗೆ ಸಂದೇಶ ಕಳಿಸಿದ್ದಾರೆ.
ನಗರದ ಉತ್ತರಹಳ್ಳಿಯ ನಿವಾಸಿ ವಿ.ಎಸ್.ರಾಘವೇಂದ್ರ ರಾವ್ ಎನ್ನುವವರು 2021ರ ಮಾ.21ರಂದು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ನಂತರ ಕರೋನಾ ಎರಡನೇ ಅಲೆಯ ವೇಳೆ 2021ರ ಮೇ 25ರಂದು ಕೋವಿಡ್ನಿಂದ ಮೃತಪಟ್ಟಿದ್ದರು.
ಇವರು ಮೃತಪಟ್ಟ ಸುಮಾರು 8 ತಿಂಗಳ ನಂತರ ಪಾಲಿಕೆಯ 198ನೇ ವಾರ್ಡ್ನ ತಲಘಟ್ಟಪುರ ಉಪ ಅರೋಗ್ಯ ಕೇಂದ್ರದಲ್ಲಿ ಜ.23ರಂದು ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಿರುವುದಾಗಿ ಪಾಲಿಕೆ ಸಿಬ್ಬಂದಿ ಅವರ ಮೊಬೈಲ್ಫೋನ್ಗೆ ಸಂದೇಶ ಕಳಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಜತೆಗೆ, ಅವರ ಮೊಬೈಲ್ಫೋನ್ ಸಂಖ್ಯೆಗೆ ಲಸಿಕೆ ಪ್ರಮಾಣ ಪತ್ರ ಕಳುಹಿಸಲಾಗಿದೆ. ಇದನ್ನು ನೋಡಿ ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.
ಗುರಿ ತಲುಪಲು ಸಿಬ್ಬಂದಿ ವಾಮಮಾರ್ಗ: ರಾಜ್ಯದಲ್ಲಿ ಕೋವಿಡ್ ಲಸಿಕೆ ಶೇ.100 ಗುರಿ ತಲುಪುವಂತೆ ಆರೋಗ್ಯ ಇಲಾಖೆ ಸಚಿವರು ಕಠಿಣ ಸಂದೇಶ ರವಾನಿಸಿದ್ದಾರೆ. ಅದರಲ್ಲಿ ದಕ್ಷಿಣ ಕನ್ನಡ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ನೀಡಿಕೆಗೆ ಹಿನ್ನಡೆ ಉಂಟಾಗಿರುವುದು ಇಲಾಖೆ ಕೆಂಗಣ್ಣಿಗೆ ಗುರಿಯಾಗಿತ್ತು. ಇದನ್ನು ಸರಿಪಡಿಸಿಕೊಳ್ಳಲು ಪಾಲಿಕೆ ಆರೋಗ್ಯ ಸಿಬ್ಬಂದಿ ಲಸಿಕೆ ನೀಡದಿದ್ದರೂ ಸುಳ್ಳು ಪ್ರಮಾಣಪತ್ರ ನೀಡಲು ಮುಂದಾಗಿದ್ದಾರೆ. ಮೊದಲ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯದವರು 6 ರಿಂದ 8 ತಿಂಗಳವರೆಗೆ ಎರಡನೇ ಡೋಸ್ ಪಡೆಯದಿದ್ದಲ್ಲಿ ಅವರ ಮೊಬೈಲ್ಫೋನ್ಗೆ ಲಸಿಕೆ ನೀಡಿರುವ ಸಂದೇಶ ಕಳುಹಿಸಲಾಗುತ್ತಿದೆ. ಇಂತಹ ಅನೇಕ ಪ್ರಕರಣಗಳು ಈ ಮೊದಲೇ ಬಿಬಿಎಂಪಿ ಸೇರಿ ಬೇರೆ ಜಿಲ್ಲಾ ಕೇಂದ್ರಗಳಲ್ಲಿ ನಡೆದಿವೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ಕ್ರಮಕ್ಕೆ ಉತ್ತರ ಹಳ್ಳಿ ನಿವಾಸಿ ರಾಘವೇಂದ್ರ ಕುಟುಂಬಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.