ಜಿಲ್ಲೆ

ಅಧಿಕಾರಿಗಳು, 200 ಕಂಪನಿಗಳಿಗೆ ಕೋವಿಡ್​ ಶಾಕ್​:ನೋಟಿಸ್​ ಕೊಟ್ಟ ಆರೋಗ್ಯ ಇಲಾಖೆ

ಬೆಂಗಳೂರು: ಕೋವಿಡ್​ ಸಂದರ್ಭದಲ್ಲಿ ಪರಿಸ್ಥಿತಿ ದುರುಪಯೋಗ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಅಧಿಕಾರಿಗಳು ಮತ್ತು ಕಂಪನಿಗಳಿಗೆ ಆರೋಗ್ಯ ಇಲಾಖೆ ಶಾಕ್​ ನೀಡಿದ್ದು, 150 ಕೋಟಿ ರೂ. ವಸೂಲಿಗೆ ಮುಂದಾಗಿದೆ.

ಹೈಕೋರ್ಟ್​ ನ್ಯಾ.ಜಾನ್​ ಮೈಕೆಲ್​ ಡಿ. ಕುನ್ಹಾ ವರದಿ ಆಧರಿಸಿ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮ (ಕೆಎಸ್​ಎಂಎಸ್​ಸಿಎಲ್​) ಅಂದಾಜು 200 ಕಂಪನಿಗಳಿಗೆ ನೋಟಿಸ್​ ಜಾರಿ ಮಾಡಿದೆ. ನೋಟಿಸ್​ಗೆ ಉತ್ತರ ಕೊಟ್ಟಿರುವ ಕೆಲ ಕಂಪನಿಗಳು ಸಾಗಾಣಿಕೆ ವೆಚ್ಚ ಸೇರಿ ಇತರ ಕಾರಣಗಳಿಂದ ಅಂದಿನ ಪರಿಸ್ಥಿತಿಗೆ ತಕ್ಕಂತೆ ದರ ನಮೂದಿಸಿರುವುದಾಗಿ ಉತ್ತರ ಕೊಟ್ಟಿವೆ. ಇದನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ಕುರಿತು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲದೆ, ಆಗ ವಿವಿಧ ಇಲಾಖೆಗಳಲ್ಲಿ ಆಯುಕ್ತರಾಗಿದ್ದ ಐಎಎಸ್​, ಕೆಎಎಸ್​ ಅಧಿಕಾರಿಗಳು, ನಿರ್ದೇಶಕರು, ಗ್ರೂಪ್​ "ಎ' ಸೇರಿ ಇತರ ಸಿಬ್ಬಂದಿಗೂ ನಡುಕ ಶುರುವಾಗಿದೆ.

ಕೋವಿಡ್​-19ಗೆ ಸಂಬಂಧಿಸಿದಂತೆ 2020ರ ಮಾರ್ಚ್​ನಿಂದ 2022ರ ಡಿಸೆಂಬರ್​ ಅವಧಿಯಲ್ಲಿ ಆರೋಗ್ಯ ಇಲಾಖೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ, ಬಿಬಿಎಂಪಿ ಸೇರಿ ಇತರ ಇಲಾಖೆಗಳಲ್ಲಿ ವೈದ್ಯಕಿಯ ಪರಿಕರಗಳ ಖರೀದಿಯಲ್ಲಿ ಬೃಹತ್​ ಅವ್ಯವಹಾರ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ, 2024ರ ಸೆ.15ರಂದು ಹೈಕೋರ್ಟ್​ ನ್ಯಾ.ಜಾನ್​ ಮೈಕೆಲ್​ ಡಿ. ಕುನ್ಹಾ ಅವರನ್ನು ವಿಚಾರಣಾ ಆಯುಕ್ತರಾಗಿ ನೇಮಿಸಿತ್ತು. ತನಿಖೆ ಕೈಗೆತ್ತಿಗೊಂಡಿದ್ದ ಆಯೋಗ, ಕೋವಿಡ್​ ಅವಧಿಯಲ್ಲಿ ನಡೆಸಿರುವ ಖರೀದಿಗಳ ಎಲ್ಲ ದಾಖಲೆ ಒದಗಿಸುವಂತೆ ಆರೋಗ್ಯ ಇಲಾಖೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯಕ್ಕೆ ಸೂಚಿಸಿತ್ತು. ಟೆಂಡರ್​, ನೇಮಕಾತಿ, ಔಷಧ, ಉಪಕರಣ, ವೆಂಟಿಲೇಟರ್​ಗಳು, ಆಮ್ಲಜನಕ ಟಕಗಳ ನಿರ್ವಹಣೆ ಬಗ್ಗೆ ದಾಖಲೆ ನೀಡುವಂತೆ ಕಿದ್ವಾಯಿ ಸಂಸ್ಥೆಗೂ ತಾಕೀತು ಮಾಡಿತ್ತು. ನಗರ ಸ್ಥಳಿಯ ಸಂಸ್ಥೆಗಳು ಮತ್ತು ಜಿಲ್ಲೆಗಳಲ್ಲಿ ಖರೀದಿಗಳ ಬಗ್ಗೆಯೂ ದಾಖಲೆ ಕೇಳಿದೆ. ಜತೆಗೆ, ಕೋವಿಡ್​ ಅಕ್ರಮದ ಬಗ್ಗೆ ದಾಖಲೆಗಳು ಇದ್ದರೆ ನೀಡುವಂತೆ ಸಾರ್ವಜನಿಕರಿಗೆ ಆಯೋಗ ಮನವಿ ಮಾಡಿತ್ತು. ಬಳಿಕ, ಸಲ್ಲಿಕೆಯಾದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ 7,223 ಕೋಟಿ ರೂ. ಮೊತ್ತದ ಅವ್ಯವಹಾರ ನಡೆದಿದೆ ಎಂದು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿತ್ತು.

ಅಕ್ರಮ ಹೇಗೆ ನಡೆದಿತ್ತು?

ಆರೋಗ್ಯ ಇಲಾಖೆಯ ಅಧೀನದ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್​ಎಚ್​ಎಂ), ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮದಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ಹಾಗೂ ಸಕ್ಷಮ ಅಧಿಕಾರಿಗಳು ನೀಡಿದ ಆಡಳಿತಾತ್ಮಕ ಅನುಮೋದನೆ ಗಾಳಿಗೆ ತೂರಿ ಅರ್ಹತೆ ಇಲ್ಲದ ಕಂಪನಿಗಳಿಗೆ ಖರೀದಿ ಆದೇಶ ಪತ್ರಿ ಕೊಟ್ಟಿರುವುದು, ಮಾರುಕಟ್ಟೆ ದರಕ್ಕಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಸರ್ಕಾರದ ಅನುಮತಿ ಪಡೆಯದೆ 4ಜಿ ಅಡಿ ಟೆಂಡರ್​ ನಡೆಸಿರುವುದು, ನಕಲಿ ದಾಖಲೆ ಸಲ್ಲಿಸಿದ್ದ ಕಂಪನಿಗಳಿಗೆ ಟೆಂಡರ್​ ಕೊಟ್ಟಿರುವುದು, ಕಮಿಷನ್​ ಆಸೆಗಾಗಿ ಬೇಕಾಬಿಟ್ಟಿ ಖರೀದಿ ಆದೇಶ ಪ್ರತಿ ಹಂಚಿಕೆ ಮಾಡಲಾಗಿತ್ತು. ಕೆಲ ಕಂಪನಿಗಳು ಕಳಪೆ ಔಷಧ ಮತ್ತು ಉಪಕರಣಗಳನ್ನು ಖರೀದಿಸಿ ರೋಗಿಗಳಿಗೂ ಹಂಚಿಕೆ ಮಾಡಲಾಗಿತ್ತು. ಅಲ್ಲದೆ, ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯದಲ್ಲಿಯೂ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಪಿಪಿಇ ಕಿಟ್​, ವೆಂಟಿಲೇಟರ್​, ಎಕ್ಸ್​ರೇ ಯಂತ್ರ ಸೇರಿ ವಿವಿಧ ಬಗೆಯ ವೈದ್ಯಕಿಯ ಸಲಕರಣೆಗಳನ್ನು ಖರೀದಿಯಲ್ಲಿ ಬೃಹತ್​ ಅಕ್ರಮ ನಡೆದಿತ್ತು.

ದಾಖಲೆ ಮುಚ್ಚಿಟ್ಟಿದ್ದ ಅಧಿಕಾರಿಗಳು: ಕೋವಿಡ್​ ವೇಳೆ ಔಷಧ, ವೈದ್ಯಕಿಯ ಉಪಕರಣಗಳ ಖರೀದಿಸಿರುವ ದಾಖಲೆಗಳು ನ್ಯಾಯಮೂರ್ತಿಗೂ ಸಿಗದಂತೆ ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಪ್ರಯತ್ನಿಸಿರುವ ಬಗ್ಗೆ ಗಂಭೀರ ಆರೋಪಗಳಿತ್ತು. ತನಿಖೆಯಲ್ಲಿ ಅಕ್ರಮ ಪತ್ತೆಯಾದರೂ ಕ್ರಮ ಕೈಗೊಳ್ಳದಂತೆ ಈಗಿನ ಸರ್ಕಾರದ ಉನ್ನತ ನಾಯಕರ ಜತೆಯೂ ಮಾತುಕತೆ ನಡೆಸಿದ್ದರು. ಆರೋಗ್ಯ ಇಲಾಖೆ ಅಧೀನದ ಕೆಎಸ್​ಎಂಎಸ್​ಸಿಎಲ್​ನಲ್ಲಿ ಸಾವಿರಾರು ಕೋಟಿ ರೂ.ಮೌಲ್ಯದ ಟೆಂಡರ್​ ನಡೆಸಿ ಔಷಧ, ಉಪಕರಣಗಳನ್ನು ಖರೀದಿಸಲಾಗಿತ್ತು. ಟೆಂಡರ್​ ನೀಡಿರುವುದು, ಹಣ ಪಾವತಿ ವಿವರಗಳು ಸೇರಿ ಇತರ ಮಾಹಿತಿ ಒಳಗೊಂಡ ಲಕ್ಷಕ್ಕೂ ಅಧಿಕ ನಕಲು ಪ್ರತಿಗಳನ್ನು ತನಿಖಾ ತಂಡಕ್ಕೆ ನೀಡಲಾಗಿತ್ತು.