ಬೆಂಗಳೂರು: ಬ್ರಿಟನ್ ರಾಜ್ಯಕ್ಕೆ ಬಂದಿರುವ ಎಲ್ಲರ ಮಾಹಿತಿ ಸಂಗ್ರಹಿಸಿ ಪತ್ತೆ ಹಚ್ಚಲಾಗಿದೆ. ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಮೊಬೈಲ್ ಮೂಲಕ ಸಂಪರ್ಕಿಸಿ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನ ಸೌಧ ಮಹಾದ್ವಾರದ ಬಳಿ ಬಿಎಸ್ ಎಫ್ ಸೈಕಲ್ ಯಾತ್ರೆಗೆ ಸಿಎಂ ಬಿಎಸ್ ವೈ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾನುವಾರ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಯು.ಕೆ.ಯಿಂದ ಮೊದಲ ಹಂತದಲ್ಲಿ ರಾಜ್ಯಕ್ಕೆ ಬಂದವರಿಗೆ ಹೊಸ ರೂಪದ ಕರೊನಾ ವೈರಾಣು ಬಗ್ಗೆ ಮಾಹಿತಿಯಿಲ್ಲದೆ ಎಲ್ಲೆಡೆ ಓಡಾಡಿದ್ದಾರೆ. ಈಗ ಎಲ್ಲರ ವಿವರ ಕಲೆಹಾಕಿ ಸೂಕ್ತ ಸೂಚನೆ ನೀಡಲಾಗಿದೆ. ರೂಪಾಂತರಿ ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ತಯಾರಿಸಲಾಗುತ್ತಿದ್ದು, ಸೋಮವಾರ ಬಿಡುಗಡೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಪೂರ್ಣ ನಿರ್ಬಂಧ: ಹೊಸ ರೂಪದ ಕರೊನಾ ವೈರಾಣು ಯು.ಕೆ.ಯಲ್ಲಿ ಕಾಣಿಸಿಕೊಂಡಿರುವ ಕಾರಣ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದ್ದು, ಹೊರ ವಲಯದ ಮೋಜಿನ ಕೂಟಗಳಿಗೂ ಅನ್ವಯವಾಗುತ್ತದೆ. ಪಾರ್ಟಿ ಎಂದಾಕ್ಷಣ ಜನರು ಗುಂಪುಗೂಡಿ ವೈರಾಣು ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನಿಷೇಧ ಜಾರಿಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಬುದ್ಧಿವಾದ: ನಿರ್ಭಯಾ ಸೇಫ್ ಟೆಂಡರ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಜತೆಗೆ ಮಾತನಾಡಿರುವೆ. ಐಪಿಎಸ್ ಅಧಿಕಾರಿಗಳಿಬ್ಬರಿಗೆ ಆದೇಶ, ಉಪದೇಶ ನೀಡಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.