ಬಾಗಲಕೋಟೆ: ಮಹಿಳೆಯೊಬ್ಬಳು ಸತ್ತು ನಾಲ್ಕು ತಿಂಗಳಾಗಿದ್ದರೂ ಮೊನ್ನೆಮೊನ್ನೆಯಷ್ಟೇ ಎರಡನೇ ಡೋಸ್ ಕರೊನಾ ಲಸಿಕೆ ನೀಡಲಾಗಿದ್ದು, ಪ್ರಮಾಣಪತ್ರ ಕೂಡ ಬಂದಿದೆ!
ಹೌದು.. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಎಂಬಲ್ಲಿ ಇಂಥದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಏಪ್ರಿಲ್ನಲ್ಲಿ ನಿಧನರಾದ ಮಾಲು ಪ್ರಕಾಶ್ ಪಾವಟೆ ಎಂಬ 66 ವರ್ಷ ವಯಸ್ಸಿನ ಮಹಿಳೆಗೆ ಸೆಪ್ಟೆಂಬರ್ 8ರಂದು ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಹೀಗೆಂದರೆ ಇದು ಹೇಗೆ ಸಾಧ್ಯ ಎಂದು ಯಾರಾದರೂ ಕೇಳಿಯೇ ಕೇಳುತ್ತಾರೆ. ಆದರೆ ಸರ್ಕಾರಿ ದಾಖಲೆ ಪ್ರಕಾರ ಇದೂ ಸಾಧ್ಯವಾಗಿದೆ!
ಮಾಲು ಅವರು ಮಾರ್ಚ್ 24ರಂದು ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಆದರೆ ಆಕೆ ಏಪ್ರಿಲ್ 28ರಂದು ಕೋವಿಡ್ನಿಂದಾಗಿ ಸಾವಿಗೀಡಾಗಿದ್ದರು. ಇದೀಗ ಸೆ. 8ರಂದು ಅವರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಎಸ್ಎಂಎಸ್ ಬಂದಿದೆ. ಮಾತ್ರವಲ್ಲ, ಆ ಕುರಿತ ಪ್ರಮಾಣಪತ್ರ ಕೂಡ ಜನರೇಟ್ ಆಗಿದೆ.
ಇದನ್ನೂ ಓದಿ: ನನಗೂ ಹಣ ಕೊಡು, ಠಾಣೆಗೂ ದುಡ್ಡು ಕೊಡು ಎಂದು ರೌಡಿಶೀಟರ್ ಬಳಿ ಲಂಚ ಕೇಳಿದ ಇನ್ಸ್ಪೆಕ್ಟರ್; ರೌಡಿಶೀಟರ್ ಪರ ಶಾಸಕರ ಶಿಫಾರಸು!
ಮೃತಪಟ್ಟಿದ್ದರೂ ಲಸಿಕೆ ಪಡೆದಿದ್ದಾಗಿ ಮೆಸೇಜ್ ಬಂದಿದಷ್ಟೇ ಅಲ್ಲದೆ, ಪ್ರಮಾಣಪತ್ರ ಕೂಡ ಜನರೇಟ್ ಆಗಿರುವುದನ್ನು ನೋಡಿ ಆಕೆಯ ಮನೆಯವರಿಗೆ ಅಚ್ಚರಿ ಉಂಟಾಗಿದೆ. ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇದೀಗ ಲಸಿಕೀಕರಣ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವಂಥ ಪರಿಸ್ಥಿತಿ ಉಂಟಾಗಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದ ಅದೆಷ್ಟು ಜನರಿಗೆ ಹೀಗೆ ಲಸಿಕೆ ಪಡೆಯದೇ ಲಸಿಕೆ ನೀಡಲಾಗಿದೆ ಎಂದು ದಾಖಲೆ ಪ್ರಕಾರ ನಿರ್ಧರಿಸಲಾಗಿದೆಯೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.