ಜಿಲ್ಲೆ

ಮಡಿಕೇರಿ ಹೋಮ್​ಸ್ಟೇನಲ್ಲಿ ಮಗಳನ್ನು ಕೊಂದು ಪ್ರಾಣ ಕಳೆದುಕೊಂಡ ಕೇರಳ ಮೂಲದ ದಂಪತಿ

ಕೊಡಗು: ಆಘಾತಕಾರಿ ಘಟನೆಯೊಂದರಲ್ಲಿ ಕೇರಳ ಮೂಲದ ದಂಪತಿಗಳಿಬ್ಬರು ತಮ್ಮ 11 ವರ್ಷದ ಮಗಳನ್ನು ಕೊಲೆ ಮಾಡಿ ಆ ನಂತರ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಕೊಡಗು ಜಿಲ್ಲೆ ಮಡೆಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ಅರೇಕಾ ಹೋಮ್​ಸ್ಟೇನಲ್ಲಿ ನಡೆದಿದೆ.

ಮೃತರನ್ನು ವಿನೋದ್ (43), ಜುಬಿ ಅಬ್ರಹಾಂ (37), ಜೋಹಾನ್ (11) ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಡೆತ್​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಮೃತರು ಕೇರಳದ ಕೊಟ್ಟಾಯಂನ ನಿವಾಸಿಗಳೆಂದು ತಿಳಿದು ಬಂದಿದೆ. ಮಡಿಕೇರಿಗೆ ಪ್ರವಾಸಕ್ಕೆಂದು ಬಂದಿದ್ದ ಇವರು ಶನಿವಾರ ಸಂಜೆ 6:30ರ ಸುಮಾರಿಗೆ ಹೋಮ್​ಸ್ಟೇನಲ್ಲಿ ರೂಮ್​ ಬಾಡಿಗೆಗೆ ಪಡೆದಿದ್ದರು. ಇಂದು ಬೆಳಗ್ಗೆ ತುಂಬಾ ಹೊತ್ತು ಕಳೆದರೂ ಬಾಗಿಲು ತೆರಯದಿದ್ದಾಗ ಹೋಮ್​ಸ್ಟೇ ಸಿಬ್ಬಂದಿ ಕಿಟಕಿ ಮೂಲಕ ಪರಿಶೀಲನೆ ನಡೆಸಿದಾಗ ಮೂವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೊಟ್ಟಾಯಂನಲ್ಲಿರುವ ಕುಟುಂಬಸ್ಥರಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವರು ಬಂದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಗಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.