ಜಿಲ್ಲೆ

ಕಾರು ಅಪಘಾತಕ್ಕೆ ದಂಪತಿ ಬಲಿ; ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಗನೂ ಇಂದು ಶವವಾಗಿ ಪತ್ತೆ!

ರಾಯಚೂರು: ಗೌರಿ ಹಬ್ಬದಂದು ಕಾರು ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದ ದಂಪತಿಯ ಪುತ್ರ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಆ. 30ರಂದು ಈ ಅಪಘಾತ ಸಂಭವಿಸಿತ್ತು.

ರಾಯಚೂರಿನ ಮಸ್ಕಿ ತಾಲೂಕಿನ ಗುಡದೂರು ಬಳಿ ನಡೆದಿದ್ದ ಅಪಘಾತದಲ್ಲಿ ಕಾರು ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದಿತ್ತು. ಈ ಅಪಘಾತದಲ್ಲಿ ಸೂರ್ಯರಾವ್ (62), ಸುಬ್ಬಲಕ್ಷ್ಮೀ (58) ದಂಪತಿ ಅಂದು ಕಾರಿನಲ್ಲೇ ಮೃತಪಟ್ಟಿದ್ದರು. ಆದರೆ ಕಾರು ಚಲಾಯಿಸುತ್ತಿದ್ದ ಪುತ್ರ ಶ್ರೀನಿವಾಸ (38) ಅಂದು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಚ್ಚಿಹೋದ ಶ್ರೀನಿವಾಸ್​ಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆ ಆಗಿರಲಿಲ್ಲ. ಆದರೆ ಇಂದು ಸಿರವಾರ ತಾಲೂಕಿನ ನವಲಕಲ್ ಬಳಿ ಶ್ರೀನಿವಾಸ್ ಶವ ಪತ್ತೆಯಾಗಿದೆ.