ಬೆಂಗಳೂರು: ಪಡಿತರ ಚೀಟಿ ತಿದ್ದುಪಡಿಗೆ ವಕ್ಕರಿಸಿರುವ ಸರ್ವರ್ ಸಮಸ್ಯೆ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೇಷನ್ ಕಾರ್ಡ್ನಲ್ಲಿ ಹೆಸರು ಬದಲಾವಣೆ, ಆಧಾರ್ ಕಾರ್ಡ್ನಲ್ಲಿರುವ ಹೆಸರು, ಹೊಸ ಸದಸ್ಯರ ಸೇರ್ಪಡೆ, ಮೃತಪಟ್ಟವರ ಹೆಸರು ಡಿಲೀಟ್, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, ವಿಳಾಸ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಇದೀಗ ಲೋಕಸಭಾ ಚುನಾವಣೆ ನೀತಿಸಂಹಿತೆ ಮುಗಿದ ಬಳಿಕ ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ತಿದ್ದುಪಡಿಗೆ ತಾತ್ಕಾಲಿಕವಾಗಿ ಅವಕಾಶ ಮಾಡಿಕೊಟ್ಟಿದೆ. ಅದರಂತೆ, ಆಹಾರ ಇಲಾಖೆ ಕೆಲವೊಂದು ದಿನ ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ, ಇನ್ನೂ ಕೆಲ ದಿನಗಳಲ್ಲಿ 4 ಗಂಟೆಯಿಂದ 6 ಗಂಟೆವರೆಗೆ ತಿದ್ದುಪಡಿಗೆ ಸಮಯ ನಿಗದಿಪಡಿಸಿದೆ. ಆದರೆ, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಓನ್, ಕರ್ನಾಟಕ ಓನ್, ಬೆಂಗಳೂರು ಓನ್ ಪಡಿತರ ಚೀಟಿ ತಿದ್ದುಪಡಿಗೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೊಸ ಪಡಿತರ ಚೀಟಿ (ವೈದ್ಯಕಿಯ ಸೌಲಭ್ಯ) ಮಂಜೂರಾತಿಗೂ ಸಮಸ್ಯೆ ಎದುರಾಗಿದೆ. ಹೀಗಾಗಿ, ಎರಡು ವರ್ಷದಿಂದ ಕಾಯುತ್ತಿದ್ದ ಅರ್ಜಿದಾರರಿಗೆ ಭಾರಿ ನಿರಾಸೆಯಾಗಿದೆ. ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಸದ್ಬಳಕೆಗೆ ಬಿಪಿಎಲ್ ಕಾರ್ಡ್ ಪ್ರಮುಖವಾಗಿದೆ. ತಿದ್ದುಪಡಿಗಾಗಿ ದೈನಂದಿನ ಕೆಲಸ ಬಿಟ್ಟು ಜನ ಹಳ್ಳಿಗಳಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಪ್ರತಿ ಸೇವಾ ಕೇಂದ್ರದ ಮುಂಭಾಗ ದಿನವಿಡೀ ನಿಂತರೂ ಹೆಸರು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ. ಪಡಿತರ ತಿದ್ದುಪಡಿಗೆ ಹೆಚ್ಚು ಸಮಯ ಕೊಡಬೇಕು ಎಂದು ಆಹಾರ ಇಲಾಖೆ ವರ್ತನೆಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಪಡಿತರ ವಿತರಣೆಗೂ ಸಮಸ್ಯೆ:
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಕಾರ್ಡ್ದಾರರಿಗೆ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ವಿತರಣೆಗೂ ಸರ್ವರ್ ಭೂತ ಕಾಡುತ್ತಿದೆ. ಮುರ್ನಾಲ್ಕು ತಿಂಗಳಿಗೊಮ್ಮೆ ಉಂಟಾಗುತ್ತಿರುವ ಸಮಸ್ಯೆಯಿಂದ ಕಾರ್ಡ್ದಾರರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿ ಮುಂದೆ ಬಯೋಮೆಟ್ರಿಕ್ ನೀಡಲು ನಿಲ್ಲಬೇಕಿದೆ. ಕೇವಲ 7&8 ಕಾರ್ಡ್ದಾರರ ಬಯೋ ತೆಗೆದುಕೊಳ್ಳಲಾಗುತ್ತಿದೆ. ಉಳಿದವರು ವಾಪಸ್ ತೆರಳುತ್ತಿದ್ದಾರೆ. ಯೋಜನೆಗೆ "ಸರ್ವರ್ ಡೌನ್'ಸಮಸ್ಯೆ ನಿರಂತರವಾಗಿ ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲಾಖೆ ಹೆಣಗಾಡುವಂತಾಗಿದೆ. ಸರ್ವರ್ ಮೇಲ್ವಿಚಾರಣೆ ನಡೆಸುವವರು ಇಲಾಖೆಯಿಂದ ಸಮರ್ಪಕವಾಗಿ ಹಣ ಪಾವತಿಯಾಗದಿದ್ದರೆ ಬೇಕಂತಲ್ಲೇ ಕೆಲವೊಮ್ಮೆ ಸರ್ವರ್ ಡೌನ್ ಮಾಡುತ್ತಿರುವ ಗಂಭೀರ ಆರೋಪವಿದೆ.
ಹಣ ವರ್ಗಾವಣೆಗೂ ಸಮಸ್ಯೆ:
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಗೆ ಜು.10ಕ್ಕೆ ವರ್ಷ ತುಂಬುತ್ತಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ಪದೇಪದೆ ತಾಂತ್ರಿಕ ಅಂಶ ಅಡ್ಡಿಯಾಗುತ್ತಿದ್ದು, ಮೇ, ಜೂನ್ ಹಣ ಖಾತೆಗೆ ಜಮೆಯಾಗಿಲ್ಲ. ವರ್ಷದ ಸಂಭ್ರಮದ ಹೊಸ್ತಿಲಿನಲ್ಲಿರುವ ಸರ್ಕಾರಕ್ಕೆ ಇದರಿಂದಾಗಿ ತುಸು ಮುಜುಗರವಾಗುತ್ತಿದೆ. ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್, ಎಪಿಎಲ್ ಸೇರಿ ಒಟ್ಟು 1 ಕೋಟಿ 13 ಲಕ್ಷ ಕಾರ್ಡ್ಗಳ ಪೈಕಿ 96 ಲಕ್ಷ ಕಾರ್ಡ್ಗಳಿಗೆ 660 ಕೋಟಿ ರೂ.ಜಮೆ ಮಾಡಲಾಗುತ್ತದೆ. ಲೋಕಸಭಾ ಚುನಾವಣಾ ಘೋಷಣೆಗೂ ಮುನ್ನ ಅಂದರೆ ಜನವರಿ, ೆಬ್ರವರಿ ಹಣವೂ ಖಾತೆದಾರರಿಗೆ ಬಂದಿರಲಿಲ್ಲ. ಬಳಿಕ, ತಾಂತ್ರಿಕ ಸಮಸ್ಯೆ ಬಗೆಹರಿಸಿ ಎರಡು ತಿಂಗಳ ಹಣವನ್ನು ಒಂದೇ ಬಾರಿ ಲಾನುಭವಿಗಳ ಖಾತೆಗೆ ಮಾರ್ಚ್ನಲ್ಲಿ ಜಮೆ ಮಾಡಲಾಗಿತ್ತು. ಬಳಿಕ, ಮಾರ್ಚ್ನಿಂದ ಮೇವರೆಗೆ ಹಣ ಬಂದಿರಲಿಲ್ಲ. ಹೊಸ ಸಾಫ್ಟ್ವೇರ್ ಪರಿಷ್ಕರಿಸಿದ ಬಳಿಕ ಮಾರ್ಚ್, ಏಪ್ರಿಲ್ ಹಣ ಮಾತ್ರ ಹಾಕಲಾಗಿದೆ. ಆದರೆ, ಮೇ, ಜೂನ್ ಹಣ ಜಮೆಯಾಗಿಲ್ಲ. ಇದರಿಂದಾಗಿ ಜನಪ್ರಿಯ ಯೋಜನೆಗೆ ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆ ಬಗೆಹರಿಸಲು ಇಲಾಖೆ ಸಚಿವರು ಸೇರಿ ಅಧಿಕಾರಿಗಳು ವಿಫಲರಾಗಿದ್ದಾರೆ.