ಜಿಲ್ಲೆ

ಕರೊನಾ ಸೋಂಕಿತನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್​ಗೆ ಬೆಂಕಿ: ಚಿಕಿತ್ಸೆ ಫಲಿಸದೇ ಇಬ್ಬರು ಸಾವು

ಬೆಂಗಳೂರು: ಕರೊನಾ ಸೋಂಕಿತನನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್​ಗೆ ಬೆಂಕಿ ಹೊತ್ತಿಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರೋಗಿ ಹಸೀನಾ (40) ಹಾಗೂ ಸಾದಿಕ್ (23) ಎಂಬುವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ರೋಗಿ ಹಸೀನಾ‌ಗೆ ಸುಟ್ಟ ಗಾಯಗಳಾಗಿದ್ದವು, ಸೀನಾ ಸಂಬಂಧಿ ಸಾದಿಕ್ ತಲೆಗೆ ತೀವ್ರಗಾಯ ಮಾತ್ರವಲ್ಲದೆ, ಕಾಲು ಸಹ ಮುರಿದಿತ್ತು. ತಕ್ಷಣ ಅವರನ್ನು ಮತ್ತೊಂದು ಆಂಬ್ಯುಲೆನ್ಸ್​ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.

ಮೃತದೇಹಗಳನ್ನ ಸದ್ಯ ತುಮಕೂರಿನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.

ಸರಣಿ ಅಪಘಾತದ ವೇಳೆ ಅವಘಡ

ನಿನ್ನೆ ರೋಗಿ ಹಸಿನಾ ಸೇರಿ 5 ಮಂದಿ ಆಂಬ್ಯುಲೆನ್ಸ್​ನಲ್ಲಿ ಚಲಿಸುತ್ತಿದ್ದಾಗ ಆಂಬ್ಯುಲೆನ್ಸ್​, ಕಂಟೇನರ್​ಗೆ ಡಿಕ್ಕಿ ಹೊಡೆದಿತ್ತು. ಇದೇ ವೇಳೆ ಆಂಬ್ಯುಲೆನ್ಸ್​ಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾದ ಬೆನ್ನಲ್ಲೇ ಆಂಬ್ಯುಲೆನ್ಸ್​ ಧಗಧಗನೆ ಹೊತ್ತಿ ಉರಿಯಿತು. ನೆಲಮಂಗಲದ ದಾಬಸ್ ಪೇಟೆ ಸಮೀಪದ ಎಡೇಹಳ್ಳಿಯಲ್ಲಿ ಅವಘಡ ಸಂಭವಿಸಿತ್ತು.

ಘಟನೆ ಬೆನ್ನಲ್ಲೇ ಸ್ಥಳೀಯರು ಟ್ಯಾಂಕರ್ ವಾಹನದಿಂದ ಬೆಂಕಿ ನಂದಿಸಿದರು. ಕೂಡಲೇ ಮತ್ತೊಂದು ಆಂಬುಲೆನ್ಸ್ ವಾಹನದ ಮೂಲಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಹಸಿನಾ ಮತ್ತು ಸಾದಿಕ್​ ಸಾವಿಗೀಡಾಗಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.