ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದ ಕರೊನಾ ವೈರಸ್ ಸೋಂಕಿತನೊಬ್ಬ ತನ್ನ ಫ್ಲ್ಯಾಟ್ನಲ್ಲೇ ನರಳಿ ನರಳಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಯಶವಂತಪುರ ಬಳಿಯ ಬ್ರಿಗೇಡ್ ಗೇಟ್ವೇ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು, ಸೋಂಕಿತ ಉದ್ಯಮಿಯಾಗಿದ್ದ. ಕಳೆದ ಒಂದು ವಾರದಿಂದ ಫ್ಲ್ಯಾಟ್ನಲ್ಲಿ ಒಬ್ಬನೆ ವಾಸವಾಗಿದ್ದ.
ನಿನ್ನೆ ತಡರಾತ್ರಿ ಉಸಿರಾಟದ ಸಮಸ್ಯೆ ಆಗಿ ಯಶವಂತಪುರದ ಬಳಿ ಆಸ್ಪತ್ರೆಯೊಂದಕ್ಕೆ ತೆರಳಿದ್ದ. ಆದರೆ, ಈಗ ಅಡ್ಮಿಟ್ ಮಾಡಿಕೊಳ್ಳಲು ಬೆಡ್ ಇಲ್ಲ. ಏನು ಅಗುವುದಿಲ್ಲ ಎಂದು ಹೇಳಿ ವೈದ್ಯರು ವಾಪಸ್ ಮನೆಗೆ ಕಳಿಸಿದ್ದರು.
ಮನೆಗೆ ಮರಳಿದ ಆತನಿಗೆ ಮತ್ತೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ರಾತ್ರಿ ತನ್ನ ಅಣ್ಣನಿಂದ ಊಟ ಪಡೆದಿದ್ದ. ಆದರೆ, ತಡರಾತ್ರಿ ಮನೆಯಲ್ಲೇ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮಲಗಿದ್ದ ಕಾಟ್ನಿಂದ ಕೆಳಗೆ ಬಿದ್ದು ಸೋಂಕಿತನ ತಲೆಗೆ ಏಟು ಬಿದ್ದಿದ್ದು, ಸೋಂಕಿತನ ರಕ್ತ ಬಾಗಿಲ ಬಳಿವರೆಗೂ ಹರಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. (ದಿಗ್ವಿಜಯ ನ್ಯೂಸ್)