ಬೆಂಗಳೂರು: ಕರೊನಾ ಸಮೀಕ್ಷೆ ಕಾರ್ಯಕ್ಕೆ ಪ್ರತಿ ಮತಗಟ್ಟೆ ವ್ಯಾಪ್ತಿಯ ಮತಗಟ್ಟೆ ಅಧಿಕಾರಿ(ಬಿಎಲ್ಒ) ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯವಾಗುವಂತೆ ಹೆಚ್ಚುವರಿ ಒಬ್ಬ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸೋಂಕಿತರನ್ನು ಮೊದಲೇ ಗುರುತಿಸಿ ಗುಣಮುಖರಾಗಿಸುವ ಸಲುವಾಗಿ 5 ದಿನದಲ್ಲಿ ಸಮೀಕ್ಷೆ ಮುಕ್ತಾಯಗೊಳಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಈಗಾಗಲೇ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರುಗಳು ಕಡ್ಡಾಯವಾಗಿ ಭಾಗವಹಿಸಬೇಕು.
ಒಂದೊಮ್ಮೆ ಅವರು ಲಭ್ಯವಿಲ್ಲದಿದ್ದಲ್ಲಿ ಮತ್ತೊಬ್ಬ ಶಿಕ್ಷಕರನ್ನು ನೇಮಿಸಬೇಕು. ಸರ್ಕಾರಿ, ಅನುದಾನಿತ ಶಿಕ್ಷಕರ ಲಭ್ಯತೆ ಆಧಾರದ ಮೇಲೆ ಪ್ರತಿ ಮತಗಟ್ಟೆ ಅಧಿಕಾರಿ ಜತೆಗೆ ಮತ್ತೊಬ್ಬ ಶಿಕ್ಷಕರ ಮಾಹಿತಿಯನ್ನು ಬುಧವಾರ ಸಂಜೆಯೊಳಗೆ ಅಪರ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಮೂಲಕ ಮಾಹಿತಿ ತಪ್ಪದೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.
ಮಾಹಿತಿಯನ್ನು ಹೆಲ್ತ್ ವಾಚ್ ಮೊಬೈಲ್ ಆಪ್ ಮೂಲಕ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಬೇಕು, ರಾಜ್ಯದ ಎಲ್ಲ ಉಪನಿರ್ದೇಶಕರು(ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಿಡಿಗಳ ಮಾರ್ಗದರ್ಶನದಲ್ಲಿ ಕ್ರಮವಹಿಸುವಂತೆ ಹೇಳಲಾಗಿದೆ.