ಜಿಲ್ಲೆ

ಮಾರ್ಚ್​ 31ರವರೆಗೆ ಇಡೀ ರಾಜ್ಯ ಲಾಕ್​ಡೌನ್​ ಮಾಡಲು ಸರ್ಕಾರ ಚಿಂತನೆ: ಸಂಜೆಯೊಳಗೆ ನಿರ್ಧಾರ ಪ್ರಕಟ

ಬೆಂಗಳೂರು: ಮಾರಕ ಕರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯವನ್ನು ಮಾರ್ಚ್​ 31ರವರೆಗೆ ಲಾಕ್​ಡೌನ್​ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಮೊದಲು ಬೆಂಗಳೂರು, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳಿಗೆ ಮಾರ್ಚ್​ 31ರವರೆಗೆ ನಿರ್ಬಂಧ ಹೇರಲಾಗಿತ್ತು. ಆದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜನರು ಜಾಗೃತರಾಗದಿರುವ ಕಾರಣ ಇಡೀ ರಾಜ್ಯಕ್ಕೆ ಲಾಕ್​ಡೌನ್​ ವಿಸ್ತರಿಸಲು ರಾಜ್ಯ ಸರ್ಕಾರ ಚರ್ಚಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ ಅವರು ಕೋವಿಡ್-19 ತಡೆಗಟ್ಟಲು ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಜತೆ ಚರ್ಚೆ ಮಾಡಲಾಗಿದೆ. ತಜ್ಞರು ನೀಡಿದ ಸಲಹೆ ಗಂಭೀರವಾಗಿ ತಗೆದುಕೊಂಡು ಕಾರ್ಯರೂಪಕ್ಕೆ ತರಲಾಗುತ್ತದೆ. ಖಾಸಗಿ ಆಸ್ಪತ್ರೆಯ ವೈದ್ಯರು ನೆರವು ನೀಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1700 ಬೆಡ್​ ವ್ಯವಸ್ಥೆ ಮಾಡಲಾಗಿದೆ. 1000 ವೆಂಟಿಲೇಟರ್​ ಅನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ನಿರ್ಬಂಧಗಳನ್ನು ಹೇರಿದಾಗ ಜನರು ಮನೆಯಿಂದ ಹೊರಗಡೆ ಬಂದಿರಲಿಲ್ಲ. ಆದರತೆ, ಸ್ವಲ್ಪ ನಿರ್ಬಂಧಗಳನ್ನು ಕಡಿತಗೊಳಿಸಿದಾಗ ಬೆಂಗಳೂರು ಮತ್ತೆ ತುಂಬಿ ತುಳುಕುತ್ತಿದೆ. ಹೀಗಾಗಿ ಇಂದು ಸಂಜೆಯೊಳಗೆ ಒಂದು ನಿರ್ಧಾರ ತಗೆದುಕೊಳ್ಳುತ್ತೇವೆ. ಬೆಂಗಳೂರಿಗರು ಸೋಂಕು ಮುಕ್ತ ಗ್ರಾಮಗಳಿಗೆ ತೆರಳದಂತೆ ಮನವಿ ಮಾಡಿದ್ದೇವೆ. ಅಲ್ಲದೆ, ಬಡವರಿಗೆ ತೊಂದರೆಯಾಗಬಾರದೆಂದು ಇಂದಿರಾ ಕ್ಯಾಂಟಿನ್​ನಲ್ಲಿ ಉಚಿತ ಊಟ ನೀಡಲಾಗುವುದು ಎಂದು ಹೇಳಿದರು.

ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ಲಾಕ್ ಡೌನ್ ಮಾಡಿದರು ಎಂಬ ಆರೋಪ ಬರೋದು ಬೇಡ ಎನ್ನುವ ಕಾರಣಕ್ಕೆ ಸಂಜೆ ಪ್ರತಿಪಕ್ಷ ನಾಯಕರ ಜತೆ ಸಮಾಲೋಚಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ. ಇನ್ನು ಮಾರ್ಚ್​ 27ರವರೆಗೂ ಬಜೆಟ್​ ಅಧಿವೇಶನ ನಡೆಯುತ್ತದೆ ಎಂದರು.

ದೇಶದಲ್ಲಿ ಈವರೆಗೆ 400ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 8 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಓರ್ವ ಬಲಿಯಾಗಿದ್ದು, 25ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. (ದಿಗ್ವಿಜಯ ನ್ಯೂಸ್​)