ಬೆಂಗಳೂರು: ರಾಜ್ಯದ 5 ಜಿಲ್ಲೆಗಳಲ್ಲಿ ಕರೊನಾ ಕಲ್ಪಿತ ಲಸಿಕೆ ಆಂದೋಲನ (ಮಾಕ್ ಡ್ರೈವ್) ಶನಿವಾರ(ಜ.2) ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಕರೊನಾ ಲಸಿಕೆ ಹಾಕುವುದಕ್ಕೆ ಮಾಡಿಕೊಂಡ ಸಿದ್ಧತೆಗಳನ್ನು ಪರೀಕ್ಷಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮೈಸೂರು, ಬೆಂಗಳೂರು, ಶಿವಮೊಗ್ಗ, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಆಂದೋಲನ ಆಯೋಜಿಸಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು ಸೇರಿದಂತೆ ನಿಗದಿಪಡಿಸಿದ ತಲಾ 25 ಸಿಬ್ಬಂದಿಗೆ ಕಲ್ಪಿತ ಲಸಿಕೆ ಹಾಕಲಾಗುವುದು. ಈ ಕುರಿತು ಸಂಬಂಧಿಸಿದವರ ಮೊಬೈಲ್ ಗೆ ಗೊತ್ತುಪಡಿಸಿದ ವೇಳೆ ಸಹಿತ ಆಹ್ವಾನದ ಸಂದೇಶ ರವಾನೆಯಾಗಲಿದೆ. ಬೇರೆ ರಾಜ್ಯಗಳಲ್ಲಿ ಆಯ್ದ ಎರಡು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದರೆ, ಕರ್ನಾಟಕದಲ್ಲಿ ಅತಿ ಹೆಚ್ಚಿನ ವ್ಯವಸ್ಥೆ ಸಿದ್ಧತೆ ಮಾಡಿಕೊಂಡಿರುವ ಅಧಿಕ ಜಿಲ್ಲೆಗಳಲ್ಲಿ ಆಂದೋಲನ ಏರ್ಪಡಿಸಲಾಗಿದೆ ಎಂದರು.
ಇದನ್ನೂ ಓದಿ: ಈಕೆ ಫೈಜರ್ ಕರೊನಾ ಲಸಿಕೆ ಪಡೆದ ಜಗತ್ತಿನ ಮೊದಲ ವ್ಯಕ್ತಿ; ಜನ್ಮದಿನಕ್ಕೆ ಒಂದು ವಾರ ಮೊದಲು ಲಸಿಕೆಯೇ ಕೊಡುಗೆ
75 ಜನರಿಗಾಗಿ ಶೋಧ
ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಹಾಗೂ ಇತರ ಜಿಲ್ಲೆಗಳ 5 ಜನರು ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಈ ಪೈಕಿ ವಿದೇಶಿಯರು ಸೇರಿರುವ ಕಾರಣ ಸಂಬಂಧಿಸಿದ ವಲಸೆ ಅಧಿಕಾರಿಗಳಿಂದ ಮಾಹಿತಿ ಪಡೆದು ಇಂದು ಸಂಜೆಯೊಳಗೆ ಪತ್ತೆ ಹಚ್ಚುವ ವಿಶ್ವಾಸವನ್ನು ಗೃಹ ಇಲಾಖೆ ಹೊಂದಿದೆ ಎಂದು ಸುಧಾಕರ್ ಹೇಳಿದರು.
ಕಳೆದ ನವೆಂಬರ್ ನಿಂದ ಡಿಸೆಂಬರ್ ವರೆಗೆ 5,068 ಮಂದಿ ಬ್ರಿಟನ್ ನಿಂದ ರಾಜ್ಯಕ್ಕೆ ಬಂದಿದ್ದಾರೆ. ಈ ಪೈಕಿ 5238 ಜನರು ಡಿ.9ರಿಂದ ಬಂದವರಾಗಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದು ಬೇರೆ ರಾಜ್ಯಕ್ಕೆ ಹೋದವರು 810 ಜನರು. ಇವರ ಬಗ್ಗೆ ಸಂಬಂಧಿಸಿದ ರಾಜ್ಯಗಳ ಜತೆಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಯು.ಕೆ.ಯಿಂದ ರಾಜ್ಯಕ್ಕೆ ಹಿಂದಿರುಗಿದವರಲ್ಲಿ 33 ಜನರಿಗೆ ಸೋಂಕಿರುವುದು ಆರ್ ಟಿಪಿಸಿಆರ್ ಟೆಸ್ಟ್ ನಿಂದ ದೃಢಪಟ್ಟಿದ್ದು, ಮಾದರಿಗಳನ್ನು ಜೆನೊಮಿಕ್ ಟೆಸ್ಟ್ ಗಾಗಿ ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ. ಅಲ್ಲದೆ, ಸಂಪರ್ಕಿತ 5 ಜನರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈವರೆಗೆ 7 ಜನರಿಗೆ ಮಾತ್ರ ರೂಪಾಂತರಿ ಕರೊನಾ ವೈರಾಣು ಸೋಂಕು ದೃಢಪಟ್ಟಿದ್ದು, ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದರು.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..