ಉಡುಪಿ: ಹಸಿರು ವಲಯದಲ್ಲಿ ಗುರುತಿಸಿಕೊಂಡಿದ್ದ ಜಿಲ್ಲೆಗೆ ಗುರುವಾರ ಕರೊನಾ ಚಂಡ ಮಾರುತ ಅಪ್ಪಳಿಸಿದ್ದು, ಒಂದೇ ದಿನ 16 ಮಕ್ಕಳು ಸಹಿತ 27 ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಮಹಾರಾಷ್ಟ್ರ ರಾಜ್ಯ ಮುಂಬೈನಿಂದ ಆಗಮಿಸಿದ 23 ಮಂದಿ, ತೆಲಂಗಾಣದಿಂದ ಆಗಮಿಸಿದ್ದ ಮೂವರು, ಕೇರಳದಿಂದ ಬಂದಿದ್ದ ಒಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕರೊನಾ ಸೋಂಕಿತ ವ್ಯಕ್ತಿಗಳನ್ನುಪ್ರತ್ಯೇಕ ಕ್ವಾರಂಟೈನ್ ಮಾಡಿ, ಇವರಿಂದ ಪ್ರಾಥಮಿಕ, ದ್ವೀತಿಯ ಹಂತದ ಸಂಪರ್ಕಗೊಂಡವರ ಪರಿಶೀಲನೆ ಮತ್ತು ಗಂಟಲು ದ್ರವ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಮಾ.29ರವರೆಗೆ ಕಾಣಿಸಿಕೊಂಡಿದ್ದು ಮೂರು ಪ್ರಕರಣಗಳು ಮಾತ್ರ. ಅನಂತರ ಮೇ 15ರವರೆಗೆ ಯಾವುದೇ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಮೇ 15ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ.20ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ 17 ಸಕ್ರೀಯವಾಗಿದ್ದು, 3 ಮಂದಿ ಗುಣಮುಖರಾಗಿದ್ದಾರೆ, 54 ವರ್ಷ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಇದೀಗ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಸಂಖ್ಯೆ 45ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದಿರುವ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದ ಸಾಕಷ್ಟು ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷೆ ಇಂದು-ನಾಳೆ ಬರಬಹುದಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.