ಜಿಲ್ಲೆ

ಕರೊನಾ ಭಯಕ್ಕೆ ಅಪ್ಪನಿಗೆ ನೋ ಎಂಟ್ರಿ: ಮನೆಗೆ ಬಂದ ವೃದ್ಧ ತಂದೆಯನ್ನೇ ವಾಪಾಸ್ ಕಳಿಸಿದ ಮಗಳು

ಹೊಸನಗರ: ಜಗತ್ತಿನಾದ್ಯಂತ ಹರಡಿರುವ ಕರೊನಾ ವೈರಸ್, ಸಂಬಂಧಿಕರು ಹಾಗೂ ಸ್ನೇಹಿತರನ್ನು ಭಯದಿಂದ ನೋಡುವಂತೆ ಮಾಡಿರುವುದು ಸುಳ್ಳಲ್ಲ. ಬೇರೆ ಊರಿನಿಂದ ತಮ್ಮ ಮನೆಗೆ ಬಂದವರು ಯಾರೊಂದಿಗೂ ಸೇರುವಂತಿಲ್ಲ... ಓಡಾಡುವಂತಿಲ್ಲ... ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಗಳ ಮನೆಗೆ ಬಂದ ವೃದ್ಧ ತಂದೆಯನ್ನು ಮಗಳು ಮನೆಯೊಳಗೆ ಸೇರಿಸದೆ ವಾಪಸ್ ಕಳಿಸಿದ ಘಟನೆ ನಗರ ಹೋಬಳಿಯಲ್ಲಿ ನಡೆದಿದೆ.

ಹೌದು... ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದ 77 ವರ್ಷದ ವೃದ್ಧನೊಬ್ಬ ನಗರ ಹೋಬಳಿಯಲ್ಲಿರುವ ಮಗಳ ಮನೆಗೆ ಬಂದಿದ್ದರು. ಆದರೆ ಕರೊನಾ ವೈರಸ್ ಭಯದಿಂದ ಮಗಳು ತನ್ನ ತಂದೆಯನ್ನು ಮನೆಯೊಳಗೆ ಬಿಟ್ಟುಕೊಳ್ಳದೆ ವಾಪಾಸ್ ಕಳಿಸಿದ್ದಾರೆ.

ಇಡೀ ದೇಶವೇ ಲಾಕ್‌ಡೌನ್ ಆಗಿದ್ದು, ಯಾವುದೇ ವಾಹನಗಳ ಸಂಚಾರವೂ ಇಲ್ಲದೆ ಆ ವಯೋವೃದ್ಧ ಬೇರೆ ದಿಕ್ಕು ಕಾಣದೆ ಭದ್ರಾವತಿ ದಾರಿ ಹಿಡಿದು ಹಾಗೂ ಹೀಗೂ ನಗರದವರೆಗೆ ಬಂದಿದ್ದರು. ಅದೇನೋ ಕಾಯಿಲೆ ಬಂದಿದೆಯಂತೆ... ಅದಕ್ಕೆ ನನ್ನ ಮಗಳು ನನ್ನನ್ನು ಮನೆಯೊಳಗೆ ಸೇರಿಸದೆ ವಾಪಾಸ್ ಹೊಗು ಎಂದು ಕಳಿಸಿದ್ದಾಳೆ. ಭದ್ರಾವತಿಗೆ ಹೋಗ್ಬೇಕು... ಬಿಪಿ ಮಾತ್ರೆ ಬೇಕು ಎಂದು ಕಂಡಕಂಡವರ ಬಳಿ ವೃದ್ಧ ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಸ್ಪಂದನೆ: ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮ ಕಾರ್ಯಪಡೆ ಸದಸ್ಯ ಕರುಣಾಕರ ಶೆಟ್ಟಿ ಸ್ಥಳಕ್ಕೆ ಆಗಮಿಸಿ ವೃದ್ಧನಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದರು. ನಂತರ ನಗರ ಆಸ್ಪತ್ರೆಗೆ ದಾಖಲಿಸಿದರು. ಸಾರ್ವಜನಿಕರ ಮಾಹಿತಿ ಆಧರಿಸಿ ಸ್ಪಂದಿಸಿದ ಡಿಸಿ ಕೆ.ಬಿ.ಶಿವಕುಮಾರ್ ವೃದ್ಧನನ್ನು ಭದ್ರಾವತಿಗೆ ತಲುಪಿಸಲು ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್ ವಿ.ಎಸ್.ರಾಜೀವ್‌ಗೆ ಸೂಚಿಸಿದರು. ಕೂಡಲೇ 108 ವಾಹನದ ಮೂಲಕ ವೃದ್ಧನನ್ನು ಭದ್ರಾವತಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.