ಜಿಲ್ಲೆ

ಶಾಲೆಗೆ ಹಳೇ ವಿದ್ಯಾರ್ಥಿ, ಗ್ರಾಮಸ್ಥರ ಕೊಡುಗೆ

ಇಂದಿರಾ ಎನ್ ಕೆ

ಕೋಟ: ಲಕ್ಷಾಂತರ ವಿದ್ಯಾರ್ಥಿಗಳನ್ನು ಸಮಾಜಕ್ಕೆ ರೂಪಿಸಿಕೊಟ್ಟ ಹಿರಿಮೆ ಈ ಶಾಂಭವಿ ಶಾಲೆಗೆ ದೊರಕಬೇಕಿದೆ. ಆ ಕಾಲಘಟ್ಟದಲ್ಲೇ ಶೈಕ್ಷಣಿಕ ಕ್ಷೇತ್ರದ ಭಾಷ್ಯ ಬರೆದ ಈ ಶಾಲೆ ಗತವೈಭವ ಮರುಕಳಿಸಬೇಕಿದೆ ಅಲ್ಲದೆ, ಇದರ ಉಳಿವಿಗೆ ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಮುಂದಡಿ ಇಡಬೇಕಿದೆ ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.

ಗಿಳಿಯಾರು ಶಾಂಭವಿ ವಿದ್ಯಾದಾಯಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಅರಳು ಹಸ್ತ ಪತ್ರಿಕೆ ಬಿಡುಗಡೆಗೊಳಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಅಧ್ಯಕ್ಷತೆ ವಹಿಸಿದರು. ಕ್ಷೇತ್ರ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ., ಸಿಆರ್ ಪಿ.ಸವಿತಾ ಆಚಾರ್, ಕೋಟ ಗ್ರಾಪಂ ಸದಸ್ಯ ಅಜಿತ್ ದೇವಾಡಿಗ, ಆಡಳಿತ ಸಂಚಾಲಕ ಸಚಿನ್ ಕಾರಂತ್, ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾನಂದ ಗಿಳಿಯಾರು, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಜೋಗಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿ, ವಿನೋದಾ ವಿಜಯ್, ಸರಿತಾ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.

ಕೊಡುಗೆ, ಬಹುಮಾನ ವಿತರಣೆ

ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಹಾಗೂ ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಬಾರಕೆರೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಆಡಳಿತ ಮಂಡಳಿ ವತಿಯಿಂದ ಶಾಲೆಗೆ ಉಚಿತ ತರಕಾರಿ ಒದಗಿಸುತ್ತಿರುವ ಮಂಜುನಾಥ ಪೂಜಾರಿ, ಶಾಲೆಗೆ ಕುರ್ಚಿ ಕೊಡುಗೆಯಾಗಿ ನೀಡಿದ ಹಳೇ ವಿದ್ಯಾರ್ಥಿ ಗಣೇಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೀತಾನಂದ ಫೌಂಡೇಶನ್ ಕೊಡಮಾಡಿದ ವಿದ್ಯಾರ್ಥಿವೇತನ ನೀಡಲಾಯಿತು.