ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನಲ್ಲಿ ಸೋಮವಾರ ಸಂಜೆ ಆರಂಭವಾದ ಮಳೆ ರಾತ್ರಿಯಿಡೀ ಸುರಿದಿದ್ದು, ಮಂಗಳವಾರವೂ ಮುಂದುವರಿದಿದೆ. ಇದರಿಂದ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿವೆ.
ಬೆಳಗ್ಗೆನಿಂದಲೇ ವ್ಯಾಪಕ ಮಳೆಯಾಗಿದ್ದು ಉಭಯ ತಾಲೂಕಿನಲ್ಲಿ ಒಂದೆರಡು ವಾರಗಳ ನಂತರ ಬಿರುಸಿನ ಮಳೆ ಸುರಿದಿದೆ. ನಿರಂತರ ಮಳೆಯ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಕೃತಕ ನೆರೆ ಉಂಟಾಗಿವೆ.
ಕೋಟೇಶ್ವರ, ತೆಕ್ಕಟ್ಟೆ, ಕೋಟ, ಕುಂದಾಪುರ ಸರ್ವೀಸ್ ರೋಡಿನ ಟಿ.ಟಿ. ರಸ್ತೆಯ ಎರಡೂ ಭಾಗದಲ್ಲಿ ಮಳೆ ನೀರು ನಿಂತು ಕೃತಕ ಕೆರೆ ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡಿದರು. ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟುಗಳು ಸೋಮವಾರವೇ ಹಿಂದಿರುಗಿದ್ದು, ಮಂಗಳವಾರ ಮೀನುಗಾರಿಕೆಗೆ ಇಳಿಯಲಿಲ್ಲ. ಕಡಲಿನಲ್ಲಿ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.