ಸುಬ್ರಹ್ಮಣ್ಯದಲ್ಲಿ ಅರಣ್ಯ ಇಲಾಖೆಯಿಂದ ಆನೆ ಮೃತದೇಹ ಹುಡುಕಾಟ ಕಾರ್ಯ ನಡೆಯಿತು 
ಜಿಲ್ಲೆ

ಮುಂದುವರಿದ ಆನೆ ಕಳೇಬರ ಪತ್ತೆ ಕಾರ್ಯ : ಕಾರ್ಯಾಚರಣೆಗೆ ಪ್ರವಾಹ ಅಡ್ಡಿ

ಇಂದಿರಾ ಎನ್ ಕೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಸೋಮವಾರ ರಾತ್ರಿ ತೇಲಿ ಬಂದಿರುವ ಆನೆ ಕಳೇಬರದ ಪತ್ತೆಗೆ ಅರಣ್ಯ ಇಲಾಖೆ ಎರಡು ದಿನದಿಂದ ಕಾರ್ಯಾಚರಣೆ ನಡೆಸುತ್ತಿದೆ.

ನೀರಿನ ಹರಿವು ಹೆಚ್ಚಾಗಿದ್ದರಿಂದ ಆನೆ ಕಳೇಬರ ಕೊಚ್ಚಿ ಹೋಗಿತ್ತು. ಮಂಗಳವಾರ ಮತ್ತು ಬುಧವಾರ ಅರಣ್ಯ ಇಲಾಖೆ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಹುಡುಕಾಟ ಮುಂದುವರಿಸಿತು. ಆದರೆ ಭಾರಿ ಮಳೆಯಿಂದ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಹುಡುಕಾಟ ಕಾರ್ಯಾಚರಣೆಗೆ ಅಡ್ಡಿಯಾಯಿತು. ನೀರಿನಲ್ಲಿ ಕೊಚ್ಚಿ ಹೋಗಿರುವ ಆನೆ ಕಳೇಬರ ನೀರಿನ ತಳಭಾಗದಲ್ಲಿ ಸೇರಿರುವ ಅಥವಾ ನದಿಯ ಕಾಡು, ಪೊದೆಯಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಅಧಿಕ ಪ್ರವಾಹದ ಕಾರಣ ಮತ್ತಷ್ಟು ದೂರ ಕೊಚ್ಚಿಕೊಂಡು ಹೋಗಿರಬಹುದು ಎಂದು ಶಂಕಿಸಲಾಗಿದೆ.