ಬಂಟ್ವಾಳ: ಯುವ ಸಮುದಾಯ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಸಶಕ್ತ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.
ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಬಂಟ್ವಾಳ ತಾಲೂಕಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹೈನುಗಾರಿಕಾ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ವೈದ್ಯರು ಮತ್ತು ಅಧ್ಯಕ್ಷರು ಚರ್ಚೆ ನಡೆಸಿ ಕೆಲ ನಿರ್ಧಾರ ತೆಗೆದುಕೊಳ್ಳಲಾಯಿತು. ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ನಿರ್ದೇಶಕರಾದ ಪದ್ಮನಾಭ ಶೆಟ್ಟಿ ಅರ್ಕಜೆ, ಸುಭದ್ರಾ ರಾವ್, ಸವಿತಾ ಶೆಟ್ಟಿ, ಎಂ.ಡಿ.ವಿವೇಕ್, ವ್ಯವಸ್ಥಾಪಕ ಡಾ.ರವಿರಾಜ್ ಉಡುಪ, ಉಪವ್ಯವಸ್ಥಾಪಕ ಡಾ.ಕೇಶವ ಹಾಗೂ ಒಕ್ಕೂಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಕ್ತ ಸಾಲಿನಲ್ಲಿ ಪಿಯುಸಿ ಮತ್ತು ಎಸ್.ಎಸ್. ಎಲ್.ಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಸ್.ಮನೀಷ ಅವರನ್ನು ಸನ್ಮಾನಿಸಲಾಯಿತು.
ನಿರ್ದೇಶಕ ಸುಧಾಕರ ರೈ ಸ್ವಾಗತಿಸಿದರು. ನಿರ್ದೇಶಕಿ ಸವಿತಾ ಶೆಟ್ಟಿ ವಂದಿಸಿದರು. ವಿಸ್ತರಣಾಧಿಕಾರಿ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.