ಮಂಗಳೂರು: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಅಂಡಾರು ಗ್ರಾಮ ಪಂಚಾಯಿತಿಗೊಳಪಟ್ಟ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಮೊರಂಟೆಬೈಲು ಪ್ರದೇಶಕ್ಕೆ ಅರಣ್ಯ ಇಲಾಖೆ ಗಸ್ತು ರಸ್ತೆ(ಪ್ಯಾಟ್ರೋಲಿಂಗ್ ಪಾಥ್) ನಿರ್ಮಿಸುತ್ತಿದ್ದು, ಈ ಮೂಲಕ ಇಲ್ಲಿನ ಕುಟುಂಬದ ದಶಕಗಳ ಸಮಸ್ಯೆಗೆ ಮುಕ್ತಿ ದೊರೆಯುತ್ತಿದೆ.
ನಕ್ಸಲ್ ಸಕ್ರಿಯ ಪ್ರದೇಶವಾಗಿದ್ದ ಮುಟ್ಲುಪಾಡಿಯಿಂದ 4 ಕಿ.ಮೀ. ದೂರದ ದಟ್ಟಾರಣ್ಯದ ಮೊರಂಟೆಬೈಲು ಎಂಬಲ್ಲಿ 3 ಕುಟುಂಬದ 19 ಮಂದಿ ವಾಸವಾಗಿದ್ದು, ಕಾಲುದಾರಿಯಲ್ಲೇ ಪಯಣ ಸಾಗಿತ್ತು. ಕುಟುಂಬದಲ್ಲಿ ನಡೆದಾಡಲು ಅಶಕ್ತವಾಗಿರುವ ಅನಾರೋಗ್ಯಪೀಡಿತ 13 ವರ್ಷ ಪ್ರಾಯದ ಬಾಲಕಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ಯಬೇಕಾದ ಸ್ಥಿತಿಯಿತ್ತು.
ರಸ್ತೆ ನಿರ್ಮಾಣದ ಮೊದಲ ಹಂತದ ಕಾಮಗಾರಿ ಫೆ.4ರಂದು ಆರಂಭಗೊಂಡಿದೆ. ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶದ ಏರುಹಾದಿಯಲ್ಲಿ ಜೆಸಿಬಿ ಬಳಸಿ ಈಗಾಗಲೇ ಒಂದು ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರಣ್ಯ ಗಸ್ತು ರಸ್ತೆ ನಿರ್ಮಾಣ:
ಪಶ್ಚಿಮಘಟ್ಟಗಳ ಸಾಲಿನಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಸಂದರ್ಭ ನಂದಿಸಲು ಅರಣ್ಯ ಇಲಾಖೆ ವಾಹನ ಸಂಚರಿಸಲು ಅನುವಾಗುವ ನಿಟ್ಟಿನಲ್ಲಿ ಗಸ್ತು ರಸ್ತೆ ನಿರ್ಮಿಸಲಾಗುತ್ತಿದೆ. ಕಾಲುದಾರಿ ಪಕ್ಕದಲ್ಲಿದ್ದ ಮರಗಳನ್ನು ಉಳಿಸಿಕೊಂಡೇ ಪೊದೆ, ಗಿಡಗಂಟಿ ತೆರವುಗೊಳಿಸಿ ರಸ್ತೆ ನಿರ್ಮಾಣ ನಡೆಯುತ್ತಿದೆ. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳು ತೋರಿದ ಇಚ್ಛಾಶಕ್ತಿ, ಮಾನವೀಯ ಕಾಳಜಿ ಆದಿವಾಸಿಗಳ ಬದುಕಿಗೆ ಬಲ ತುಂಬಿದೆ. ಮನಸ್ಸಿದ್ದರೆ ಮಾರ್ಗ ಎಂಬುದು ಸಾಬೀತಾಗಿದೆ.
ದೂರವಾದ ಭೀತಿ, ಅಭಿವೃದ್ಧಿಗೆ ಮುನ್ನುಡಿ
ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ 2002-03ರ ಹೊತ್ತಿಗೆ ಗರಿಗೆದರಿದ ನಕ್ಸಲ್ ಚಟುವಟಿಕೆ ತೀರಾ ಇತ್ತೀಚಿನವರೆಗೂ ಮುಂದುವರಿದಿತ್ತು. 2010 ಮಾ.1ರಂದು ಮುಟ್ಲುಪಾಡಿಯ ಮೈರೋಳಿಯಲ್ಲಿ ಕುತ್ಲೂರಿನ ವಸಂತ ಗೌಡ, 2024 ನ.18ರಂದು ಕಬ್ಬಿನಾಲೆಯ ಪೀತುಬೈಲ್‌ನಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಎಎನ್‌ಎಫ್ ಎನ್‌ಕೌಂಟರ್‌ಗೆ ಹತರಾಗಿದ್ದರು. ನಕ್ಸಲ್ ಬಾಧಿತ ಈ ಪ್ರದೇಶವಾಸಿಗಳ ನೈಜ ಸಮಸ್ಯೆಯ ಅರಿವು ಅಧಿಕಾರಿಗಳು ಹಾಗೂ ಹೊರಜಗತ್ತಿಗೆ ಇರಲಿಲ್ಲ. ಜ.8ರಂದು 6 ಮಂದಿ ನಕ್ಸಲರು ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ ಬಳಿಕ ಈ ಭಾಗ ನಕ್ಸಲ್‌ಮುಕ್ತಗೊಂಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಅಭಿವೃದ್ಧಿಗೆ ವೇಗ ದೊರೆತಿದೆ. ಇಲ್ಲಿ ಮಾತ್ರವಲ್ಲದೆ ಈದು ಗ್ರಾಮದ ನೂರಾಲ್‌ಬೆಟ್ಟುವಿನ ಕನ್ಯಾಲು, ಕಬ್ಬಿನಾಲೆಯ ಮತ್ತಾವು, ಮುಂಡಾನಿ-ಬೀರಬೆಟ್ಟು, ಬೇರ್ಕಳ ಪ್ರದೇಶದಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದು ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ ಈದು ತಿಳಿಸಿದ್ದಾರೆ.
‘ವಿಜಯವಾಣಿ’ ವರದಿ ಪ್ರಕಟಿಸಿತ್ತು
ಮೊರಂಟೆಬೈಲು ನಿವಾಸಿಗಳ ಬದುಕು-ಬವಣೆ ಕುರಿತು ‘ವಿಜಯವಾಣಿ’ 2024 ಡಿ.26ರಂದು ‘ದಟ್ಟಡವಿಯೊಳಗೊಂದು ದಾರಿಯ ಕೂಗು’ ಶೀರ್ಷಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಸಂದರ್ಭ ಅಧಿಕಾರಿಗಳು ಶೀಘ್ರ ರಸ್ತೆ ನಿರ್ಮಾಣ ಭರವಸೆ ನೀಡಿದ್ದು, ಅದರಂತೆ ಒಂದೂವರೆ ತಿಂಗಳೊಳಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ನನಗೀಗ 81 ವರ್ಷ ಪ್ರಾಯ. ನನ್ನ ತಂದೆಯ ಕಾಲದಿಂದಲೂ ರಸ್ತೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ರಸ್ತೆ ನಿರ್ಮಾಣ ಕನಸಾಗಿಯೇ ಉಳಿದಿತ್ತು. ಮಾಧ್ಯಮಗಳ ವರದಿ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದೆ. ಇದೀಗ ಶತಮಾನದ ಕನಸು ನನಸಾಗುತ್ತಿದೆ.
ವಾಸು ಮಲೆಕುಡಿಯ, ಮೊರಂಟೆಬೈಲು ನಿವಾಸಿ