ಜಿಲ್ಲೆ

ಬಾರ್ಜ್ ಸೇವೆ ಒದಗಿಸಲು ಒಪ್ಪಿಗೆ

ಇಂದಿರಾ ಎನ್ ಕೆ

ಕುಂದಾಪುರ: ಶ್ರೀ ಕ್ಷೇತ್ರ ಸಿಗಂದೂರು ಸಂಪರ್ಕಿಸಲು ಶರಾವತಿ ಹಿನ್ನಿರಿನಲ್ಲಿ ದೇಶದ ಎರಡನೇ ಅತಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣದ ನಂತರ ಅಲ್ಲಿ ಬಳಕೆಯಲ್ಲಿದ್ದ ಬಾರ್ಜ್ ಸೇವೆಯನ್ನು ಗಂಗೊಳ್ಳಿ-ಕುಂದಾಪುರ ನಡುವಿನ ಸಂಪರ್ಕಕ್ಕೆ ಬಳಸಬೇಕು ಎಂದು ಸಾರ್ವಜನಿಕರಿಂದ ಒತ್ತಡ ಬಂದಿರುವ ಹಿನ್ನೆಲೆಯಲ್ಲಿ ಸಂಸದರಾದ ಬಿ.ವೈ.ರಾಘವೇಂದ್ರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

ಸಿಗಂದೂರು ಸಂಪರ್ಕಕ್ಕೆ ಬಳಸುತ್ತಿದ್ದ ಬಾರ್ಜ್ ಸೇವೆ ನೂತನ ಸೇತುವೆ ನಿರ್ಮಾಣದ ನಂತರ ನಿಲ್ಲಿಸಲಾಗಿದೆ. ಆ ಬಾರ್ಜ್ ಅನ್ನು ಗಂಗೊಳ್ಳಿ-ಕುಂದಾಪುರ ನಡುವೆ ಸಂಪರ್ಕ ಕಲ್ಪಿಸಲು ಪಂಚಗಂಗಾವಳ್ಳಿ ನದಿಗೆ ಒದಗಿಸಬೇಕು ಎಂದು ಸ್ಥಳೀಯರು ಹಲವು ರೀತಿಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.

ಸಿಗಂದೂರಿಗೆ ಸಂಪರ್ಕ ಕಲ್ಪಿಸುತ್ತಿದ್ದ ಬಾರ್ಜ್‌ನ ಕಾರ್ಯ ಕ್ಷಮತೆ ಪರಿಶೀಲಿಸಿ, ಅದು ಉಪಯೋಗ ಯೋಗ್ಯವಾಗಿದ್ದಲ್ಲಿ ಅದನ್ನೇ ಬಳಕೆ ಮಾಡುವುದು. ಕಾರ್ಯಕ್ಷಮ ಕ್ಷೀಣಿಸಿದ್ದರೆ ಹೊಸ ಬಾರ್ಜ್ ಸೇವೆಗೆ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೂ ಮಾತುಕತೆ ನಡೆಸಲು ಸಂಸದರು ಮುಂದಾಗಿದ್ದಾರೆ. ಹೀಗಾಗಿ ಪಂಚಗಂಗಾವಳ್ಳಿ ನದಿಗೆ ಬಾರ್ಜ್ ಸೇವೆ ಒದಗಿಸುವ ಮೂಲಕ ಗಂಗೊಳ್ಳಿಯಿಂದ ಕುಂದಾಪುರಕ್ಕೆ ಹೋಗಲು ಅಥವಾ ಅಲ್ಲಿಂದ ವಾಪಸ್ ಆಗಲು 17 ಕಿ.ಮೀ. ಸುತ್ತುವುದನ್ನು ತಪ್ಪಿಸಲು ಇದರಿಂದ ಸಾಧ್ಯವಿದೆ ಎಂದು ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.