purasahe 
ಜಿಲ್ಲೆ

ಯುಜಿಡಿ ಪೂರ್ಣಕ್ಕೆ ಒಮ್ಮತದ ನಿರ್ಧಾರ

Karthika K.S

ವಿಜಯವಾಣಿ ಸುದ್ದಿಜಾಲ ಕುಂದಾಪುರ ನಗರದಲ್ಲಿ ಯುಜಿಡಿ ಕಾಮಗಾರಿ ಅನುಷ್ಠಾನಗೊಳ್ಳುವ ಮೊದಲೇ ಸೂಕ್ತ ಯೋಜನೆ ರೂಪಿಸಿ ಟೆಂಡರ್ ಕರೆದಿದ್ದರೆ ರಸ್ತೆಗಳು ಹಾಳಾಗುತ್ತಿರಲಿಲ್ಲ. ಯೋಜನೆ ಪೂರ್ಣಗೊಳಿಸಲು ಎಲ್ಲ ಸದಸ್ಯರ ಜತೆ ಚರ್ಚಿಸಿ ನಂತರ ಅನುದಾನದ ಕುರಿತು ಸಚಿವ ಹಾಗೂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪ್ರಯತ್ನಿಸೋಣ ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಹೇಳಿದರು. ಕುಂದಾಪುರದ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಂದಾಪುರ ಪುರಸಭೆಯ ವಿಶೇಷ ಸಭೆಯಲ್ಲಿ ಮಾತನಾಡಿದರು. ಹೊಸ ಪೈಪ್‌ಲೈನ್‌ಗೆ ಸ್ಥಳಾವಕಾಶ ಇಲ್ಲ. ಯೋಜನೆಯನ್ನು ಪೂರ್ಣಗೊಳಿಸುವ ಕುರಿತು ಒಟ್ಟಾಗಿ ಮುಂದಾಗಬೇಕು. ಇದಕ್ಕೆ 30 ಕೋಟಿ ರೂ. ಅನುದಾನ ಅವಶ್ಯಕತೆ ಇದ್ದು, ಇಷ್ಟೊಂದು ದೊಡ್ಡ ಮೊತ್ತವನ್ನು ಪುರಸಭೆಯಿಂದ ಭರಿಸುವುದು ಅಸಾಧ್ಯ ಎಂದರು. ಗಬ್ಬು ನಾರುತ್ತಿರುವ ಖಾರ್ವಿಕೇರಿ ಪ್ರದೇಶ: ಯುಜಿಡಿ ಪ್ರಾರಂಭವಾಗುವ ವೇಳೆ ಎಸ್‌ಟಿಪಿ, ವೆಟ್‌ವೆಲ್ ನಿರ್ಮಿಸಲು ಜಾಗದ ಸಮಸ್ಯೆ ಎಂದು ನೆಪವೊಡ್ಡುತ್ತಿದ್ದವರು ಈಗ ಅನುದಾನದ ಕೊರತೆ ಇದೆ ಎಂದು ಮತ್ತೊಂದು ನೆಪ ಹೇಳುತ್ತಿದ್ದೀರಿ. ರಸ್ತೆಗಳು ಮಾತ್ರ ಯಾವುದೂ ಉತ್ತಮವಾಗಿಲ್ಲ. 12 ವರ್ಷಗಳಿಂದ ಅನಧಿಕೃತವಾಗಿ ಪೈಪ್‌ಲೈನ್ ಮೂಲಕ ಕೊಳಚೆ ನೀರನ್ನು ನದಿಗೆ ಬಿಡಲಾಗುತ್ತಿದೆ. ಖಾರ್ವಿಕೇರಿ ಪ್ರದೇಶ ಗಬ್ಬು ನಾರುತ್ತಿದೆ ಎಂದು ಸದಸ್ಯರಾದ ಶ್ರೀೀಧರ ಶೇರುಗಾರ್, ಅಶ್ವಿನಿ ಪ್ರದೀಪ್, ಚಂದ್ರಶೇಖರ ಖಾರ್ವಿ, ಶೇಖರ ಪೂಜಾರಿ ಅಸಮಾಧಾನ ಹೊರಹಾಕಿದರು. ಇಲಾಖೆಯ ಇಂಜಿನಿಯರ್ ಪ್ರತಿಕ್ರಿಯಿಸಿ, ಯುಜಿಡಿ ಕಾಮಗಾರಿಯಲ್ಲಿ 19 ಕೋಟಿ ರೂ. ಉಳಿದಿದ್ದು, ಕಾಮಗಾರಿ ಪೂರ್ಣಗೊಳಿಸಲು ಇನ್ನೂ 30 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ಮುಂದಿನ ಒಂದು ತಿಂಗಳೊಳಗೆ ಡಿಪಿಆರ್ ಸಿದ್ಧಪಡಿಸಿ ಸದಸ್ಯರೊಂದಿಗೆ ಚರ್ಚಿಸಿ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಪೂರೈಕೆಯಾಗದ ನೀರು: ಪೈಪ್ ತುಂಡಾಗಿದೆ ಎಂದು ನೆಪ ಹೇಳಿ ವಾರದ ಎರಡು ಮೂರು ದಿನ ನೀರು ಪೂರೈಕೆಯಾಗುವುದಿಲ್ಲ. ಕಳಪೆ ಗುಣಮಟ್ಟದ ಪೈಪ್ ಹಾಕಲಾಗಿದೆ. ಕುಂದಾಪುರ ಖಾರ್ವಿಕೇರಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸದಸ್ಯರಾದ ಸಂತೋಷ್ ಶೆಟ್ಟಿ ಹಾಗೂ ಚಂದ್ರಶೇಖರ ಖಾರ್ವಿ ಸಮಸ್ಯೆ ಮನವರಿಕೆ ಮಾಡಿದರು. ಪುರಸಭೆಗೆ ಸರಬರಾಜು ಆಗುವ ಪೈಪ್‌ಲೈನ್‌ನಲ್ಲಿ ಗ್ರಾಪಂ ಸಹಿತ 15 ಕಡೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇಂತಹ ಕಡೆಗಳಲ್ಲಿ ಪ್ರೋ ಕಂಟ್ರೋಲ್ ವಾಲ್ಅಳವಡಿಸಿದರೆ ನೀರು ಪೂರೈಕೆ ಸರಿಯಾಗಲಿದೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಇಂಜಿನಿಯರ್ ಉತ್ತರಿಸಿದರು. ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಮತ್ತು ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

ವಾಹನ ಪಾರ್ಕಿಂಗ್ ಗೊಂದಲ

ಕುಂದಾಪುರ ಶಾಸ್ತ್ರಿ ವೃತ್ತದ ಫ್ಲೈಓವರ್ ಅಡಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಅವಕಾಶಗಳಿಲ್ಲ. ಆದರೂ ಇಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿದರೆ ಸುಮಾರು 200 ವಾಹನ ನಿಲ್ಲಿಸಬಹುದು ಎಂದು ಶಾಸಕ ಕಿರಣ್‌ಕುಮಾರ್ ಕೊಡ್ಗಿ ಸಲಹೆ ನೀಡಿದರು. ಸಂಚಾರಿ ಪೊಲೀಸ್ ಠಾಣೆ ಉಪನಿರೀಕ್ಷಕ ನೂತನ್ ಡಿ. ಪ್ರತಿಕ್ರಿಯಿಸಿ, ಕುಂದಾಪುರ ಪುರಸಭೆ ನಡಾವಳಿಯನ್ನು ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿಗಳಿಂದ ಗಜೆಟ್ ಆಗಬೇಕು. ಪುರಸಭೆ ವ್ಯಾಪ್ತಿಯಲ್ಲಿ ಹಾಳಾಗಿರುವ ನಾಮಫಲಕಗಳ ದುರಸ್ತಿಗೊಳಿಸಿ ಮರು ಅಳವಡಿಸಬೇಕು ಎಂದರು.

ಕಾಮಗಾರಿ ಪರಿಶೀಲಿಸದ ಅಧಿಕಾರಿಗಳು

ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಮಪರ್ಕವಾಗಿರುವ ಬಗ್ಗೆ ದೃಢೀಕರಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಿಲ್ಲ. ಬರೆಕಟ್ಟಿನಲ್ಲಿ ಗುಂಡಿ ನಿರ್ಮಿಸಿದ್ದು, ಇದುವರೆಗೆ ಮುಚ್ಚಿಲ್ಲ. ಪುರಸಭೆ ಈ ಕುರಿತು ನಿರ್ಲಕ್ಷೃ ವಹಿಸುತ್ತಿದೆ ಎಂದು ಸದಸ್ಯ ಗಿರೀಶ ಆರೋಪಿಸಿದ್ದು, ಸದಸ್ಯ ಶ್ರೀಧರ ಇದಕ್ಕೆ ದನಿಗೂಡಿಸಿದರು.