ಜಿಲ್ಲೆ

ರಾಹುಲ್ ಗಾಂಧಿ ನಡೆಸುತ್ತಿರುವುದು ಕಾಂಗ್ರೆಸ್ ಜೋಡೋ ಯಾತ್ರೆ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಚಾಮರಾಜನಗರ: ರಾಹುಲ್ ಗಾಂಧಿ ನಡೆಸುತ್ತಿರುವುದು ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ ಯಾತ್ರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಡೆದ ಹಿಂದುಳಿದ ವರ್ಗಗಳ ಜಾಗೃತಿ ವಿರಾಟ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತೇವೆ ಎಂದು ಪ್ರತಿದಿನ ಕನ್ನಡಿಯಲ್ಲಿ ಮುಖ ನೋಡಿಕೊಳ್ಳತ್ತಿದ್ದಾರೆ. ಅವರು ಹರಿಹರ ಬ್ರಹ್ಮ ಬಂದರೂ ಕೂಡ ಮುಖ್ಯಮಂತ್ರಿಯಾಗುವ ಪ್ರಶ್ನೆಯಿಲ್ಲ. ರಾಜ್ಯದಲ್ಲಿ ಇನ್ನುಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದರು.

ಸಿದ್ದರಾಮಯ್ಯ ಅನೇಕ ಬಾರಿ ಬಜೆಟ್ ಮಂಡಿಸಿದರು. ಹಿಂದುಳಿದ ವರ್ಗಗಳಿಗೆ ಎಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿಲ್ಲ. ಸುಮ್ಮನೆ ಖಾಲಿ ಡಬ್ಬದಂತೆ ಹಿಂದುಳಿದ ಪರವಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ.‌ಹಿಂದುಳಿದ ವರ್ಗದವರು ಒಗ್ಗಟ್ಟಾಗಿ ಮುಂದಿನ ದಿಗಳಲ್ಲಿ ತಕ್ಕ ಪಾಠ ಕಲಿಸುವ ಕೆಲಸ ಮಾಡಬೇಕಿದೆ ಎಂದರು.