ಜಿಲ್ಲೆ

ಕರೊನಾ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಡಿಸಿ ನಂಬರ್ ಕೊಟ್ಟ ಭೂಪ: ಮುಂದೇನಾಯ್ತು ನೀವೇ ನೋಡಿ!

ಮೈಸೂರು: ಕರೊನಾ ತಪಾಸಣೆಗೆ ಒಳಪಟ್ಟ ವ್ಯಕ್ತಿಯೊಬ್ಬ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೆಬ್ಬಾಳ ಬಡಾವಣೆ ನಿವಾಸಿಯ ಕಳ್ಳಾಟ ಇಂದು ಬಯಲಾಗಿದೆ. ಪರೀಕ್ಷೆ ನಡೆಸಿದ ವ್ಯಕ್ತಿಯ ವರದಿಯಲ್ಲಿ ಕರೊನಾ ಪಾಸಿಟಿವ್ ದೃಢವಾಗಿತ್ತು. ಇದರ ಬೆನ್ನಲ್ಲೇ ಆತ ನೀಡಿದ್ದ ನಂಬರ್‌ಗೆ ಮೈಸೂರು ಜಿಲ್ಲಾಡಳಿತದ ಕಂಟ್ರೋಲ್ ರೂಂನಿಂದ ಕರೆ ಮಾಡಲಾಗಿತ್ತು.

ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಲಾಗಿದೆ. ಆದರೆ, ಆಕಡೆಯಿಂದ ಮಾತನಾಡಿದ್ದು ಕರೊನಾ ಪಾಸಿಟಿವ್​ ವ್ಯಕ್ತಿಯಲ್ಲ, ಬದಲಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್​, ನನಗೆ ಪಾಸಿಟಿವ್ ಇದ್ಯಾ? ಎಂದು ಅಚ್ಚರಿಯಿಂದ ಕೇಳಿದ ಅವರು, ನಾನ್ ರೀ ಜಿಲ್ಲಾಧಿಕಾರಿ ಮಾತಾಡ್ತಾ ಇದ್ದೀನಿ ಎಂದಿದ್ದಾರೆ.

ಇತ್ತ ಡಿಸಿ ಮಾತು ಕೇಳಿ ಕಂಟ್ರೋಲ್ ರೂಮ್​ ಸಿಬ್ಬಂದಿ ಸಹ ತಬ್ಬಿಬ್ಬಾಗಿದ್ದಾರೆ. ಇದೀಗ ಪಾಸಿಟಿವ್ ಬಂದ ವ್ಯಕ್ತಿಗಾಗಿ ಅಧಿಕಾರಿಗಳು ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ. ಸೋಂಕಿತ ವ್ಯಕ್ತಿಯ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಯಿಂದ ಡಿಸಿಗೆ ತಲೆನೋವಾಗಿದೆ.

ಈ ರೀತಿ ಮಾಡಿದ್ರೆ ಕರೊನಾ ಸಮಸ್ಯೆ ಮತ್ತಷ್ಟು ಕರೊನಾ ಸಮಸ್ಯೆ ಉಲ್ಬಣ ಆಗಲಿದೆ. ಸಾರ್ವಜನಿಕರು ಕರೊನಾ ಕಂಟ್ರೋಲ್‌ಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.