ಪ್ರಶಾಂತ ರಿಪ್ಪನ್ಪೇಟೆ ಬೆಂಗಳೂರು : ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಸಾಮರಸ್ಯವನ್ನು ಗಟ್ಟಿಗೊಳಿಸುವ ಸದುದ್ದೇಶ ಹೊಂದಿವೆ. ಜಾತಿ, ಮತ, ಭಾಷೆ, ಪ್ರಾಂತ್ಯದ ಭೇದವನ್ನು ಮರೆತು ಜನ ಸಮ್ಮಿಳಿತಗೊಳ್ಳುವ ಜಾತ್ರೆ, ರಥೋತ್ಸವಗಳಲ್ಲಿ ಭಕ್ತಿಭಾವದ ಜತೆ ಅರಿವು ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಕೆಲ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಜಾತ್ರೆಯ ಸಂಭ್ರಮ ಮನೆಮಾಡಿದೆ. ಮಕರ ಸಂಕ್ರಾಂತಿಯ ಉತ್ತರಾಯಣ ಆರಂಭವಾಗುತ್ತಿದ್ದಂತೆ ನಾಡಿನಲ್ಲಿ ಸಾಲು ಸಾಲು ಜಾತ್ರೆಗಳು ಆರಂಭವಾಗುತ್ತವೆ. ಕೇವಲ ಧಾರ್ಮಿಕ ಉತ್ಸವವಾಗಿ ಉಳಿಯದ ಜಾತ್ರೆಗಳಲ್ಲಿ ಸಡಗರ, ಸಂಭ್ರಮದ ಜೊತೆಗೆ ಕೃಷಿ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅನಾವರಣವಾಗುತ್ತದೆ. ಸದ್ಯ ಸುತ್ತೂರು ಶ್ರೀಶಿವರಾತ್ರೀಶ್ವರ ಜಾತ್ರೆ, ಕಿತ್ತೂರು ಕರ್ನಾಟಕದ ಯಡೂರು ಶ್ರೀವೀರಭದ್ರೇಶ್ವರ ವಿಶಾಳಿ ಜಾತ್ರೆ, ನಾಲವಾರದ ಶ್ರೀಕೋರಿಸಿದ್ದೇಶ್ವರ ಜಾತ್ರೆ, ಬಳಗಾನೂರು ಶ್ರೀಚಿಕ್ಕೇನುಕೊಪ್ಪ ಚನ್ನವೀರ ಶರಣರ ಜಾತ್ರೆ, ಲಕ್ಷಾಂತರ ಭಕರ ಸಂಭ್ರಮಕ್ಕೆ ಸಾಕ್ಷಿಯಾಗುತ್ತವೆ. ಜಾತ್ರೆ, ಉತ್ಸವಗಳಿಂದ ಸಮಾಜದಲ್ಲಿ ಸಂಘಟನೆ, ಸಾಂಸ್ಕೃತಿಕ ಏಕತೆ ಹಾಗೂ ಸಾಮಾಜಿಕ ಜಾಗೃತಿಗೆ ನಾಂದಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಜಾತ್ರೆ, ರಥೋತ್ಸವಗಳು ಕೂಡಾ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸ ವ್ಯಾಖ್ಯಾನ ಬರೆದಿವೆ.
10ನೇ ಶತಮಾನದಲ್ಲಿ ಶ್ರೀಜಗದ್ಗುರು ಶಿವರಾತ್ರೀಶ್ವರರು ಕಪಿಲಾನದಿಯ ದಂಡೆಯ ಮೇಲೆ ತಪಸ್ಸು ಮಾಡುತ್ತಿದ್ದಾಗ ಈ ಮಾರ್ಗವಾಗಿ ತಲಕಾಡಿನ ಗಂಗರ ಮೇಲೆ ಯುದ್ಧಕ್ಕೆ ಬಂದ ಚೋಳ ದೊರೆಯ ಕುದುರೆ ಶಿವರಾತ್ರೀಶ್ವರರು ಕುಳಿತಿದ್ದ ಸ್ಥಳದಲ್ಲಿ ಸುತ್ತುಹಾಕುತ್ತದೆ. ಈ ಕಾರಣದಿಂದ ಈ ಊರಿಗೆ ಸುತ್ತೂರು ಎಂಬ ಹೆಸರು ಬಂದಿದೆ. ನಂತರ ಆದಿ ಜಗದ್ಗುರು ಶಿವರಾತ್ರೀಶ್ವರರು ಇಲ್ಲಿಯೇ ಮಠವನ್ನು ಸ್ಥಾಪಿಸುತ್ತಾರೆ. ಸುತ್ತೂರು ಮಠದ ಗುರುಪರಂಪರೆಯಲ್ಲಿ ಇಲ್ಲಿಯವರೆಗೆ 23 ಜನ ಜಗದ್ಗುರುಗಳು ಆಗಿ ಹೋಗಿದ್ದು, ಪ್ರಸ್ತುತ ಇರುವ 24ನೇ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀಮಠದ ಜಾತ್ರೆ ಹತ್ತು ಹಲವು ವಿಶೇಷತೆಗಳಿಂದ ಅರ್ಥಪೂರ್ಣವಾಗಿದೆ. ಜಾತ್ರೆ ಎಂದರೆ ಸಾಮಾನ್ಯವಾಗಿ ಧಾರ್ಮಿಕ ಆಚರಣೆಗಳು, ಪಾರಂಪರಿಕ ಪದ್ಧತಿಗಳಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಜಾತ್ರೆಯ ವ್ಯಾಖ್ಯಾನವನ್ನು ಬದಲಿಸಿದ ಕೀರ್ತಿ ಲಿಂಗೈಕ್ಯ ಜಗದ್ಗುರು ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಹತ್ತಾರು ವಿಭಿನ್ನ ದೃಷ್ಟಿಕೋನವನ್ನಿರಿಸಿಕೊಂಡು ಮಠದ ಜಾತ್ರೆಯನ್ನು ಆಯೋಜಿಸಲಾಗಿದ್ದು, ಪುಷ್ಯಮಾಸದ ಬಹುಳ ಜ.26ಕ್ಕೆ ಜಾತ್ರೆ ಆರಂಭವಾಗಲಿದ್ದು, ಜ.31ರವರೆಗೆ ನಡೆಯಲಿದೆ. ಜ.28ರಂದು ವಿಶೇಷ ಶ್ರೀಶಿವರಾತ್ರೀಶ್ವರರ ಮಹಾರಥೋತ್ಸವ ನಡೆಯಲಿದೆ. ಜನಪದ ಕಲಾ ಮೇಳ, ಕ್ರೀಡೆಸ್ಪರ್ಧೆ, ಕೃಷಿಮೇಳ, ಸಾಮೂಹಿಕ ವಿವಾಹ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಅನಾವರಣಕ್ಕೆ ಜಾತ್ರೆಯು ವೇದಿಕೆಯಾಗಲಿದೆ.
ಕಿತ್ತೂರು ಕರ್ನಾಟಕದ ಗಡಿಭಾಗದಲ್ಲಿರುವ ಚಿಕ್ಕೋಡಿ ತಾಲೂಕಿನ ಯಡೂರ ಶ್ರೀವೀರಭದ್ರೇಶ್ವರ ಕ್ಷೇತ್ರವು ಸಾವಿರಾರು ವರ್ಷದ ಇತಿಹಾಸ ಹೊಂದಿದ್ದು, ಲುಪ್ತವಾಗಿದ್ದ ವೀರಭದ್ರ ಕ್ಷೇತ್ರವನ್ನು ಮಹಾತಪಸ್ವಿ ಕಾಡಸಿದ್ದೇಶ್ವರರು ತಮ್ಮ ತಪೋಬಲದಿಂದ ಬೆಳಕಿಗೆ ತಂದಿದ್ದಾರೆ. 11ನೇ ಶತಮಾನದಲ್ಲಿ ಈ ಪ್ರಾಂತ್ಯವನ್ನಾಳುತ್ತಿದ್ದ ಸಿಂಗಣದೇವನೆಂಬ ರಜಪೂತ ದೊರೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಉಲ್ಲೇಖವಿದೆ. ಕಾಡದೇವರ ಮಠದ ಅಧಿಪತಿಗಳಾಗಿರುವ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ವಾರ್ಷಿಕ ಜಾತ್ರೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿರುವ ಯಡೂರ ಕ್ಷೇತ್ರ ಸಾಮರಸ್ಯದ ಪ್ರಮುಖ ಕೊಂಡಿಯಾಗಿದೆ. ವಿಶಾಳಿ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಜ.28 ರಿಂದ 30ರವರೆಗೆ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ವೀರಭದ್ರಸ್ವಾಮಿಗೆ ಬಿಲ್ವಾರ್ಚನೆ, ಧರ್ಮಜಾಗೃತಿ ಸಮಾರಂಭ, ಆರೋಗ್ಯ ತಪಾಸಣಾ ಶಿಬಿರ,ನಗೆಹಬ್ಬ, ಸಂಗೀತ ಕಾರ್ಯಕ್ರಮ, ಅಯ್ಯಚಾರ ದೀಕ್ಷೆ, ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಶೇಷವಾಗಿ ಜ.30ರಂದು ಮಹಾರಥೋತ್ಸವ ನಡೆಯಲಿದೆ.
ಕಾಖಂಡಕಿ ಮಲ್ಲಾರಾಧ್ಯರ ಶಿಷ್ಯರಾದ ಶ್ರೀಸಿದ್ದೇಶ್ವರರು ತುಂಬಿ ಹರಿಯುವ ಭೀಮನದಿಯನ್ನು ಕೋರಿ (ಕಂಬಳಿ) ಮೇಲೆ ಕುಳಿತು ದಾಟಿದ್ದರಿಂದ ಕೋರಿಸಿದ್ದೇಶ್ವರ ಎಂದು ಪ್ರಸಿದ್ಧರಾಗಿದ್ದಾರೆ. ಭಕ್ತರ ಕೋರಿಕೆಯಂತೆ ನಾಲವಾರದಲ್ಲಿ ನೆಲೆನಿಂತಿದ್ದು, ಪ್ರಸ್ತುತ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಸ್ವಾಮಿಗಳು ಸಾಮಾಜಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಠದ ಕೀರ್ತಿಯನ್ನು ವಿಸ್ತರಿಸಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಶ್ರೀಕೋರಿಸಿದ್ದೇಶ್ವರ ರಥೋತ್ಸವವು ಪ್ರಮುಖವಾಗಿದ್ದು, ಪ್ರತಿ ಪುಷ್ಯಮಾಸದ ಅವರಾತ್ರಿ ಅಮಾವಾಸ್ಯೆಯಂದು ವಿಜೃಂಭಣೆಯಿಂದ ನಡೆಯುತ್ತದೆ. ಜ.29ಕ್ಕೆ ಅಪರೂಪದ ತನಾರತಿ ಉತ್ಸವ ಹಾಗೂ ಜ.30ಕ್ಕೆ ಬೃಹತ್ ರಥೋತ್ಸವ ನಡೆಯಲಿದೆ.
ಕೊಪ್ಪಳ ಜಿಲ್ಲೆಯ ಚಿಕ್ಕೇನುಕೊಪ್ಪ ಹಿರೇಮಠದ ಶ್ರೀಚನ್ನವೀರ ಶರಣರು ತ್ರಿಕಾಲ ಜ್ಞಾನಿಗಳು, ಪವಾಡ ಪುರುಷರು. ಲೋಕ ಸಂಚಾರ ಮಾಡುತ್ತಾ ಗದಗ ಜಿಲ್ಲೆಯ ಬಳಗಾನೂರಿಗೆ ಬಂದ ಶರಣರು ಮುಂದೆ ಈ ಸ್ಥಳ ದೊಡ್ಡ ಕ್ಷೇತ್ರವಾಗುತ್ತದೆ ಎಂದು ಅಲ್ಲಿಯೇ ನೆಲೆಸಿ ಮಠವನ್ನು ನಿರ್ಮಿಸಿ ಲಿಂಗಕ್ಯರಾಗಿದ್ದಾರೆ. ಅವರ ತರುವಾಯ ಶ್ರೀಶಿವಶಾಂತವೀರ ಸ್ವಾಮಿಗಳು ಬಳಗಾನೂರು ಕ್ಷೇತ್ರವನ್ನು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಗ್ರವಾಗಿ ಅಭಿವೃದ್ಧಿಗೊಳಿಸಿದ್ದಾರೆ.ಶರಣರು ಲಿಂಗೈಕ್ಯರಾದ ಮಾಘ ಶುದ್ಧ ರಥಸಪ್ತಮಿಯಂದು ರಥೋತ್ಸವ ನಡೆಯುತ್ತದೆ. ಜ.28ರಿಂದ ಮಹಾತ್ಮರ ಜೀವನ ಸಾಧನೆ ಕುರಿತ ಪ್ರವಚನ ಆರಂಭವಾಗಲಿದ್ದು, ೆ.4ರಂದು ರಥೋತ್ಸವ ನಡೆಯಲಿದೆ. ಮುತ್ತೈದೆಯರಿಗೆ ಉಡಿ ತುಂಬುವುದು, ಸಾಮೂಹಿಕ ವಿವಾಹ, ತುಲಾಭಾರ, ಶರಣಶ್ರೀ ಪ್ರಶಸ್ತಿ ಪ್ರದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.