

ಬೆಂಗಳೂರು: ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳದ 2ನೇ ದಿನ ಶುಕ್ರವಾರ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು. 300ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಳಿಗೆಗಳ ಮುಂದೆ ಜನರ ಮುತ್ತಿಗೆ ದೃಶ್ಯ ಕಂಡು ಬಂತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ರೈತರು ಬೇರೆ ಬೇರೆ ತಳಿಯ ಬೀಜ, ಧಾನ್ಯ, ಕೃಷಿ ಯಂತ್ರೋಪಕರಣಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರೆ, ಬೆಂಗಳೂರಿಗರು ಸಿರಿಧಾನ್ಯ ಮತ್ತಿತರ ಸಾವಯವ ಪದಾರ್ಥದಿಂದ ತಯಾರಿಸಲ್ಪಟ್ಟ ವಿಶೇಷ ಖಾದ್ಯಗಳ ರುಚಿ ನೋಡುವುದು ಖರೀದಿ ಮಾಡುವುದರಲ್ಲಿ ಮಗ್ನರಾಗಿದ್ದರು.
ಸಿರಿಧಾನ್ಯಗಳಿಂದ ಕೇವಲ ಪಾರಂಪರಿಕೆ ಖಾದ್ಯಗಳಷ್ಟೇ ಅಲ್ಲದೆ ಯುವ ಸಮುದಾಯವನ್ನು ಸೆಳೆಯುವ ಆಧುನಿಕ ಆಹಾರ ಪದಾರ್ಥಗಳನ್ನು ತಯಾರಿಸಿದ್ದು ಮೇಳದ ಆಕರ್ಷಣೆ ಹೆಚ್ಚಿಸಿತ್ತು. ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ಬಿಸ್ಕತ್ ಚಕ್ಕುಲಿ, ಚಿಕ್ಕಿ, ಚಾಕಲೇಟ್, ಜಾಮುನು ಇತ್ಯಾದಿ ಖಾದ್ಯಗಳು ಆಗಮಿಸಿದವರ ಬಾಯಲ್ಲಿ ನೀರು ತರಿಸುತ್ತಿದ್ದವು. ವ್ಯಾಪಾರಿಗಳು ಟೇಸ್ಟ್ ಮಾಡಲು ಗ್ರಾಹಕರ ಸ್ಯಾಂಪಲ್‌ಗಾಗಿ ನೀಡುತ್ತಿದ್ದ ಕುರಕಲು ಮೆಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಿಲೆಟ್ ಐಸ್‌ಕ್ರೀಮ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.