ಜಿಲ್ಲೆ

ಮಹಾಕುಂಭದಲ್ಲಿ ಕಾಲ್ತುಳಿತ; ಸಿಎಂ ಸಿದ್ದರಾಮಯ್ಯರಿಂದ ಸಂತಾಪ ಸೂಚನೆ| CM Siddaramaiah

ಬೆಂಗಳೂರು: ಪ್ರಯಾಗ್​​ರಾಜ್‌ನ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಸಂತಾಪ ಸೂಚಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಪೋಸ್ಟ್​ನಲ್ಲಿ ಇಂದು ಬೆಳಗ್ಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟಿರುವುದು ತಿಳಿದು ದುಃಖಿತನಾಗಿದ್ದೇನೆ. ಮೃತರ ಆತ್ಮಗಳಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಕಾಲ್ತುಳಿತದಲ್ಲಿ ನಮ್ಮ ರಾಜ್ಯದ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ಅವರೆಲ್ಲರು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಮ್ಮವರ ಯೋಗಕ್ಷೇಮಕ್ಕಾಗಿ ಸರ್ಕಾರ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ ಎಂದು ಕೋರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾತ್ರಿ ಒಂದರಿಂದ ಎರಡು ಗಂಟೆಯ ನಡುವೆ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಏಕಾಏಕಿ ಜನಸಂದಣಿ ಹೆಚ್ಚಾದ ಕಾರಣ ಮಾತಿನ ಚಕಮಕಿ ಉಂಟಾಗಿದೆ. ಈ ವೇಳೆ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ಕೆಲವರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಮಹಾಕುಂಭಕ್ಕೆ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿದ್ದಾರೆ.

ಮೌನಿ ಅಮವಾಸ್ಯೆಯಂದು ಅಮೃತ ಸ್ನಾನವು ಮಹಾಕುಂಭದ ಅತ್ಯಂತ ಮಹತ್ವದ ಆಚರಣೆಯಾಗಿದೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. 13ರಂದು ಆರಂಭವಾದ ಮಹಾಕುಂಭದಲ್ಲಿ ಈವರೆಗೆ 20 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ಇಂದು ಅಂದರೆ ಬುಧವಾರ(ಜನವರಿ 29) 10 ಕೋಟಿ ಜನ ಬರುವ ನಿರೀಕ್ಷೆ ಇದೆ. ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾಗಿರುವ ತ್ರಿವೇಣಿ ಸಂಗಮವನ್ನು ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತಾರೆ, ಮಹಾಕುಂಭದ ಸಮಯದಲ್ಲಿ ಮತ್ತು ವಿಶೇಷವಾಗಿ ಮೌನಿ ಅಮವಾಸ್ಯೆಯಂತಹ ವಿಶೇಷ ಸ್ನಾನದ ದಿನಾಂಕಗಳಲ್ಲಿ ಸ್ನಾನ ಮಾಡಿದರೆ ಜನರ ಪಾಪಗಳನ್ನು ತೊಳೆದು ಅವರಿಗೆ ಮೋಕ್ಷ ಒದಗುತ್ತದೆ ಎಂಬ ನಂಬಿಕೆ ಇದೆ.