ಜಿಲ್ಲೆ

ಕ್ರೀಡೆಯಿಂದ ಕಲಿಕೆಗೆ ಸಿದ್ಧಿಸುತ್ತದೆ ಏಕಾಗ್ರತೆ: ಡಾ.ಸುಯೋಗ ವರ್ಧನ್ ಡಿ.ಎಂ ಅನಿಸಿಕೆ

Avinash R

ಬಂಟ್ವಾಳ: ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಪಡೆಯಬಹುದು. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಏಕಾಗ್ರತೆ ಗಳಿಸಿ ಶೈಕ್ಷಣಿಕ ಸಾಧನೆಗಳಲ್ಲೂ ಮಿಂಚಲು ಸಾಧ್ಯವಿದೆ ಎಂದು ಎಸ್.ವಿ.ಎಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಯೋಗ ವರ್ಧನ್ ಡಿ.ಎಂ ಹೇಳಿದರು.

ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಹಾಗೂ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘ ಬಂಟ್ವಾಳ ಆಡಳಿತಕ್ಕೆ ಒಳಪಟ್ಟ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ವಿದ್ಯಾಗಿರಿ ಜಂಟಿ ಆಶ್ರಯದಲ್ಲಿ, ಪದವಿ ಪೂರ್ವ ವಿಭಾಗದ ತಾಲೂಕುಮಟ್ಟದ ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ದೇಶಿಸಿ ಮಾತನಾಡಿದರು.

ಸಮೂಹ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ಕೂಡಿಗೆ ಪ್ರಕಾಶ್ ಶೆಣೈ ಪಂದ್ಯಾಟ ಉದ್ಘಾಟಿಸಿ ಶುಭಹಾರೈಸಿದರು. ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟ ಸಂಯೋಜಕ ವಸಂತ ಗೌಡ ಕೆ. ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಶೆಟ್ಟಿ ಪಾಲ್ಗೊಂಡಿದ್ದರು. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು.

ಶ್ರೀ ವೆಂಕಟರಮಣ ಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಕ್ರೀಡಾ ಮೇಲ್ವಿಚಾರಕ ಮಹೇಶ್ ಶೆಟ್ಟಿ ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಪ್ರಥಮ ಸ್ಥಾನ ಪಡೆದ ತುಂಬೆ ಪದವಿ ಪೂರ್ವ ಕಾಲೇಜು(ಬಾಲಕರ ವಿಭಾಗ), ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು(ಬಾಲಕಿಯರ ವಿಭಾಗ), ದ್ವಿತೀಯ ಸ್ಥಾನ ಪಡೆದ ಶ್ರೀರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ (ಬಾಲಕರ ವಿಭಾಗ), ವಿಠ್ಠಲ ಪದವಿ ಪೂರ್ವ ಕಾಲೇಜು ವಿಟ್ಲ(ಬಾಲಕಿಯರ ವಿಭಾಗ)ದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.