ಹಗರಿಬೊಮ್ಮನಹಳ್ಳಿ: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಟ್ಟಣದ ಮಕ್ಕಳಿಗೆ ಪೈಪೋಟಿ ನೀಡಲು ಕಂಪ್ಯೂಟರ್ ಜ್ಞಾನ ಅವಶ್ಯ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಶೀಗನಹಳ್ಳಿ 2ನೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ 40 ಲಕ್ಷ ರೂ. ವೆಚ್ಚದ ಕಂಪ್ಯೂಟರ್ ಕೊಠಡಿ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ 24 ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊಠಡಿ ನಿರ್ಮಿಸಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಕೈ ಜೋಡಿಸಲಾಗಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಉನ್ನತ ಗುರಿಯತ್ತ ಸಾಗಬೇಕು ಎಂದು ತಿಳಿಸಿದರು.
ಬಿಇಒ ಮೈಲೇಶ ಬೇವೂರು ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಾಸಕರು ಅನುಕೂಲ ಮಾಡಿದ್ದಾರೆ. ಜತೆಗೆ ಕ್ರೀಡಾ ಸಾಮಗ್ರಿಗಳನ್ನು ನೀಡಿದ್ದಾರೆ. 32 ಶಾಲೆಗಳಲ್ಲಿ ಎಲ್‌ಕೆಜಿ ಕೇಂದ್ರಗಳು (ಇಸಿಸಿ), 22 ಶಾಲೆಗಳಲ್ಲಿ 1 ನೇ ತರಗತಿಯಿಂದ ಇಂಗ್ಲಿಷ್ ಬೋಧನೆ, 150 ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿ ಹಾಗೂ ಕಾಂಪೌಂಡ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಕಲ್ಪಿಸಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪುರಸಭೆ ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಪ್ರಭಾಕರ, ಮುಖ್ಯಶಿಕ್ಷಕ ಈಶ್ವರನಾಯ್ಕ, ಸಿಬ್ಬಂದಿ, ಪ್ರಮುಖರಾದ ಕೃಷ್ಣಮೂರ್ತಿ ಶೆಟ್ರು, ಬಡಿಗೇರ್ ಸಿದ್ದರಾಜ್, ಅಳವಂಡಿ ಯಂಕಪ್ಪ, ಮೂಲಿಮನಿ ರವಿಪ್ರಸಾದ್ ಇತರರಿದ್ದರು.