More

    ಕಂಪ್ಯೂಟರ್ ಕೊಠಡಿಯಲ್ಲಿ ಬಿಸಿಯೂಟದ ಆಹಾರ ಸಾಮಗ್ರಿ ಪತ್ತೆ!

    ಮೂಡಿಗೆರೆ: ಕಿರುಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದ ಆಹಾರ ಧಾನ್ಯ, ಹಾಲಿನಪುಡಿ, ಶೂ, ಸಾಕ್ಸನ್ನು ಪ್ರಭಾರ ಮುಖ್ಯಶಿಕ್ಷಕಿ ಕಮಲಮ್ಮ ಮನೆಗೆ ಸಾಗಿಸುವ ಸಲುವಾಗಿ ಕಂಪ್ಯೂಟರ್ ಕೊಠಡಿಯೊಳಗೆ ಅಡಗಿಸಿಟ್ಟಿದ್ದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಚಂದ್ರ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಮಂಗಳವಾರ ಪತ್ತೆ ಹಚ್ಚಿದೆ.

    ಬಿಇಒ ಹೇಮಂತ್ ಚಂದ್ರ, ಇಸಿಒ ಸ್ಮಿತಾ, ಸಿಆರ್‌ಪಿ ಸುನೀಲ್, ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿಶ್ರೀ ಅವರು ಶಾಲೆ ನಿರ್ವಹಣೆ ಪರಿಶೀಲನೆ ನಡೆಸುತ್ತಿದ್ದರು. ಕಂಪ್ಯೂಟರ್ ಪರಿಶೀಲನೆಗೆಂದು ಕಂಪ್ಯೂಟರ್ ಕೊಠಡಿ ಬೀಗ ತೆರೆಸಿದಾಗ 4 ಕೆ.ಜಿ ಹಾಲಿನ ಪುಡಿ, 15 ಕೆ.ಜಿ ಬೇಳೆ, ಅಕ್ಕಿ ಚೀಲ, ಗೋದಿಚೀಲ ಮತ್ತು ಮಕ್ಕಳಿಗೆ ವಿತರಿಸಬೇಕಾಗಿದ್ದ ಶೂ, ಸಾಕ್ಸ್‌ಗಳು ಪತ್ತೆಯಾದವು.
    ಆಹಾರ ಸಾಮಗ್ರಿಯನ್ನು ದಾಸ್ತಾನು ಕೊಠಡಿಯಲ್ಲಿಸಬೇಕಾಗಿತ್ತು. ಇಲ್ಲೇಕೆ ಇರಿಸಿದ್ದೀರಿ ಎಂದು ಮುಖ್ಯಶಿಕ್ಷಕಿಯನ್ನು ಅಧಿಕಾರಿಗಳು ವಿಚಾರಿಸಿದಾಗ ಹಾಲಿನಪುಡಿ, ಬೇಳೆ ಇತರ ಸಾಮಗ್ರಿ ಬಳಕೆಯ ಅವಧಿ ಮುಕ್ತಾಯವಾಗಿದೆ. ಅದರಿಂದ ಈ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ಕಮಲಮ್ಮ ತಿಳಿಸಿದ್ದಾರೆ. ಬಳಕೆ ಅವಧಿ ಮುಕ್ತಾಯದ ದಿನಾಂಕ ಪರಿಶೀಲಿಸಿದಾಗ ಮಾರ್ಚ್ ಕೊನೆಯವರೆಗೂ ಅವಧಿ ಬಾಕಿ ಇತ್ತು. ಆಗ ಶಿಕ್ಷಕಿ ತಬ್ಬಿಬ್ಬಾಗಿದ್ದಾರೆ. ಇದರಿಂದ ಕೋಪಗೊಂಡ ಅಧಿಕಾರಿಗಳು ಕಮಲಮ್ಮ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಬಿಇಒ ಹೇಮಂತ್ ಚಂದ್ರ ತಿಳಿಸಿದ್ದಾರೆ.
    ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಕಮಲಮ್ಮ, ಬಿಸಿಯೂಟದ ದವಸ ಧಾನ್ಯ ಬೇರೆಡೆಗೆ ಸಾಗಿಸುವ ಉದ್ದೇಶ ನನಗಿಲ್ಲ. ಶಾಲೆಯಲ್ಲಿ ದವಸ ಧಾನ್ಯ, ಹಾಲಿನಪುಡಿ ಕೊರತೆ ಉಂಟಾಗಿದೆ. ಆಹಾರ ಧಾನ್ಯ ಖಾಲಿಯಾದಾಗ ಹತ್ತಿರದ ಶಾಲೆಯಿಂದ ತರಬೇಕೆಂಬ ನಿಯಮವಿದೆ. ಅದರಂತೆ ಬಿಳಗುಳ ಸರ್ಕಾರಿ ಶಾಲೆಗೆ ಲಿಖಿತ ಮಾಹಿತಿ ನೀಡಿ ಅಲ್ಲಿಂದ ಆಹಾರಧಾನ್ಯ, ಹಾಲಿನಪುಡಿ ಇತರ ಸಾಮಗ್ರಿ ತಂದಿದ್ದೇನೆ. ನಮ್ಮ ಶಾಲೆಯ ಆಹಾರ ದಾಸ್ತಾನು ಕೊಠಡಿಯಲ್ಲಿ ಇಲಿಗಳ ಕಾಟವಿರುವ ಕಾರಣ ಅಲ್ಲಿಂದ ತಂದಿದ್ದ ಆಹಾರ ಧಾನ್ಯವನ್ನು ಕಂಪ್ಯೂಟರ್ ಕೊಠಡಿಯಲ್ಲಿ ಇರಿಸಿದ್ದೆ ಎಂದು ತಿಳಿಸಿದ್ದಾರೆ.
    ಆರು ತಿಂಗಳ ಹಿಂದೆ ಕಿರುಗುಂದ ಶಾಲೆಗೆ ವರ್ಗಾವಣೆಗೊಂಡು ಬಂದ ಶಿಕ್ಷಕಿ ಕಮಲಮ್ಮ ಅವರಿಗೆ ಪ್ರಭಾರ ಮುಖ್ಯಶಿಕ್ಷಕಿ ಜವಾಬ್ದಾರಿ ನೀಡಲಾಗಿತ್ತು. ಅವರು ಬಿಸಿಯೂಟದ ಸಾಮಗ್ರಿಗಳನ್ನು ಆಗಾಗ ಸಾಗಿಸಿದ್ದಾರೆ. ಈ ವಿಚಾರವನ್ನು ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಆಹಾರ ಸಾಮಗ್ರಿ ಸಾಗಿಸುವ ವಿಚಾರ ಗ್ರಾಮಸ್ಥರಿಗೆ ತಿಳಿಯಬಾರದೆಂದು ಯಾರನ್ನೂ ಶಾಲೆ ಬಳಿ ಹೋಗಲು ಕಮಲಮ್ಮ ಬಿಡುತ್ತಿರಲಿಲ್ಲ. ಗ್ರಾಮಸ್ಥರೊಂದಿಗೆ ಉಡಾಫೆಯಾಗಿ ಮಾತನಾಡುತ್ತಾರೆ. ಪ್ರತಿ ದಿನ ಶಾಲೆಗೆ ತಡವಾಗಿ ಬರುತ್ತಾರೆ. ವಿಚಾರಿಸಿದರೆ ಜೆರಾಕ್ಸ್ ಮಾಡಿಸಲು ಹೋಗಿದ್ದೆ ಎಂದು ಸುಳ್ಳು ಹೇಳುತ್ತಾರೆ. ಜೆರಾಕ್ಸ್ ಯಂತ್ರ ಶಾಲೆಯಲ್ಲೇ ಇದ್ದರೂ ಮೂಡಿಗೆರೆಗೆ ಹೋಗಿ ಪ್ರತಿ ದಿನ ಜೆರಾಕ್ಸ್ ಮಾಡಿಸಿಕೊಳ್ಳುವ ಅಗತ್ಯವೇನಿದೆ? ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ. ನನಗೆ ಪ್ರಭಾವಿ ನೆಂಟರಿದ್ದಾರೆ. ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕುತ್ತಾರೆ. ಇಂಥ ಶಿಕ್ಷಕಿ ನಮಗೆ ಬೇಡ. ಕೂಡಲೆ ಅವರನ್ನು ಅಮಾನತು ಪಡಿಸಬೇಕು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೆ.ಆರ್.ಲೋಕೇಶ್ ಒತ್ತಾಯಿಸಿದ್ದಾರೆ.
    ಬಿಳಗುಳ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಚೂಡಾಮಣಿ ಮಾತನಾಡಿ, ಕಿರುಗುಂದ ಶಾಲೆಗೆ ನಾವು ಆಹಾರ ಧಾನ್ಯ ಕೊಟ್ಟಿಲ್ಲ. ಅಲ್ಲಿನ ಮುಖ್ಯಶಿಕ್ಷಕರಿಂದ ಆಹಾರ ಸಾಮಗ್ರಿ ಬೇಡಿಕೆಯೂ ಬಂದಿಲ್ಲ. ನಮ್ಮ ಶಾಲೆಯಲ್ಲೇ ಆಹಾರದ ಕೊರತೆ ಇದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts