ಜಿಲ್ಲೆ

ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳಿಸಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ವಾರಾಹಿ ಪೈಪ್‌ಲೈನ್ ಕಾಮಗಾರಿ ಶೀಘ್ರವೇ ಪೂರ್ಣಗೊಂಡು ನೀರು ಮನೆಮನೆಗೆ ತಲುಪಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವೆಡೆ ಖಾಸಗಿ ಜಾಗಗಳ ಸಮಸ್ಯೆ ಇರುವುದರಿಂದ ಕಾಮಗಾರಿಗೆ ಹಿನ್ನಡೆಯಾಗಿದೆ. ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಯಗಳು ಮುಗಿಯುವ ಭರವಸೆ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಸಂಸದ ಹಾಗೂ ಶಾಸಕರಿಂದ 94ಸಿ ಅಡಿಯಲ್ಲಿ 13 ಫಲಾನುಭವಿಗಳಿಗೆ ಕಾಯಂ ನಿವೇಶನ ಹಕ್ಕುಪತ್ರ, 10 ಜನರಿಗೆ ಭಾಗ್ಯಲಕ್ಷ್ಮೀ ಬಾಂಡ್ ಸಹಿತ ವಿವಿಧ ಸವಲತ್ತುಗಳ ವಿತರಣೆ ಹಾಗೂ ಅಹವಾಲು ಸ್ವೀಕಾರ ನಡೆಯಿತು.

ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ, ಉಪಾಧ್ಯಕ್ಷ ದೇವು ಪೂಜಾರಿ, ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ಪ್ರಸಾದ್ ಮಲ್ಯ, ಬೊಮ್ಮರಬೆಟ್ಟು ಗ್ರಾಪಂ ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಉಡುಪಿ ತಹಸೀಲ್ದಾರ್ ಗುರುರಾಜ್, ಇಒ ವಿಜಯ, ಗ್ರಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಸುಮನಾ ಸ್ವಾಗತಿಸಿದರು. ಕೆ.ತುಕಾರಾಮ್ ನಾಯಕ್ ಪ್ರಸ್ತಾವನೆಗೈದರು.

ಬಾಕಿ ಕಡತಗಳ ವಿಲೇವಾರಿಗೆ ಸೂಚನೆ

94 ಸಿ/ 94 ಸಿ.ಸಿ ಅಡಿಯಲ್ಲಿ ಬಾಕಿ ಇರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿಗೊಳಿಸಬೇಕು. ಅಕ್ರಮ ಸಕ್ರಮದ ಬಗ್ಗೆ ಜಂಟಿ ಸರ್ವೇ ಮಾಡಿ ಒಂದು ತಿಂಗಳೊಳಗೆ ವರದಿ ನೀಡಬೇಕು. ಪಂಚಾಯಿತಿಗೆ ಹೊಸ ಕಟ್ಟಡದ ನೀಲಿ ನಕಾಶೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.