ಜಿಲ್ಲೆ

ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಎಬಿವಿಪಿ ಧ್ವಜ; ಶಿಕ್ಷಣ ಸಚಿವರ ವಿರುದ್ಧ ದೂರು ದಾಖಲು

ತುಮಕೂರು: ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕೇಸರಿ ಧ್ವಜ ಹಾರಾಡಿದ ವಿಚಾರವಾಗಿ ಇದೀಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ತುಮಕೂರು ಜಿಲ್ಲಾ ಪೊಲೀಸರಿಗೆ ದೂರು ನೀಡಲಾಗಿದೆ.

ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ವಿ ಹರಿಪ್ರಸಾದ್ ಸಚಿವ ನಾಗೇಶ್ ವಿರುದ್ಧ ತಿಪಟೂರು ಡಿವೈಎಸ್​ಪಿ ಅವರಿಗೆ ದೂರು ನೀಡಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ನಾಗೇಶ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆಗಸ್ಟ್​ 10ರಂದು ತಿಪಟೂರು ನಗರದಲ್ಲಿ ಮೆರವಣಿಗೆ ಮೂಲಕ ರಾಷ್ಟ್ರಧ್ವಜದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಕೊಳ್ಳಲಾಗಿತ್ತು. ಆದರೆ ಈ ವೇಳೆ ತ್ರಿವರ್ಣ ಧ್ವಜಕ್ಕಿಂತಲೂ ಮೇಲೆ ಎಬಿವಿಪಿಯ ಧ್ವಜವನ್ನು ಹಾರಿಸಲಾಗಿತ್ತು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.