ಹಿರಿಯ ಸ್ತ್ರೀ ವೇಷದಾರಿ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ ನೀಡಿ ಗೌರವಿಸಲಾಯಿತು 
ಜಿಲ್ಲೆ

ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಅಂಬಾತನಯರು ನಮ್ಮ ಕಾಲಘಟ್ಟದ ಅತ್ಯಂತ ಆದರ್ಶ ವ್ಯಕ್ತಿಗಳಲ್ಲಿ ಒಬ್ಬರು. ಯಾರಿಗೂ ನೋಯಿಸದೆ ಸಹೃದಯಿಯಾಗಿ ಜನರೊಡನೆ ಬೆರೆತು ಯಾರಿಗೂ ನೋವುಂಟು ಮಾಡದೆ, ಸಂಕಷ್ಟ ನೀಡದೆ ಬದುಕಿದವರು. ಅವರ ಗುಣನಡತೆ ಈ ಸಮಾಜಕ್ಕೆ ಮಾದರಿ ಎಂದು ಉಡುಪಿ ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳೀ ಕಡೆಕಾರ್ ಹೇಳಿದರು.

ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನ ಲೇಖನ ವಿಶ್ವವಿದ್ಯಾಲಯ ಮಟ್ಟದಲ್ಲಿ ಪಠ್ಯಪುಸ್ತಕವಾಗಬೇಕಾದರೆ ಅವರಿಗಿರುವ ಜ್ಞಾನದ ಅರಿವಾಗುತ್ತದೆ. ಕೇವಲ ಒಂದು ದಿನದಲ್ಲಿ ತುಳು ನಾಟಕದ ಸ್ಕ್ರಿಪ್ಟ್ ಬರೆಯುತ್ತಾರೆ ಎಂದಾದರೆ ಅವರ ಪಾಂಡಿತ್ಯಕ್ಕೆ ಗೌರವ ಸೂಚಿಸಬೇಕು. ಅವರು ನಮ್ಮ ಕಾಲಘಟ್ಟದ ಧರ್ಮರಾಯ ಎಂದರು.

ಹಿರಿಯ ಸ್ತ್ರೀವೇಷದಾರಿ ಡಾ.ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ಅಂಬಾತನಯ ಮುದ್ರಾಡಿ ಪ್ರಶಸ್ತಿ, ಫಲಕದೊಂದಿಗೆ 25 ಸಾವಿರ ರೂ. ನೀಡಿ ಗೌರವಿಸಲಾಯಿತು. ನಾನು ಕಂಡ ಒಬ್ಬ ಸಜ್ಜನ ವ್ಯಕ್ತಿಗಳಲ್ಲಿ ಅಂಬಾತನಯರು ಒಬ್ಬರು. ಯಾವುದೇ ಕೆಲಸ ಆಗುವುದಿಲ್ಲ ಎಂದು ಹೇಳಿದವರಲ್ಲ. ಅತ್ಯಂತ ಶ್ರದ್ಧಾಭಾವದಿಂದ ದುಡಿದವರು ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ.ಎಸ್ ರಾವ್ ಮುದ್ರಾಡಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಂಬಾತನಯ ಅವರ ಪತ್ನಿ ಅಕ್ಕಮ್ಮ ಶೆಟ್ಟಿಗಾರ್, ಸಹೋದರ ವಿಜಯಕುಮಾರ್ ಉಪಸ್ಥಿತರಿದ್ದರು. ವಿಜಯಕುಮಾರ್ ಸ್ವಾಗತಿಸಿದರು. ಶ್ರೀಮುದ್ರಾಡಿ ನಿರೂಪಿಸಿ, ಲಲಿತಾ ವಂದಿಸಿದರು. ನಂತರ ‘ರುಕ್ಮಾಂಗದ ಚರಿತ್ರೆ’ ತಾಳಮದ್ದಳೆ ನಡೆಯಿತು.

ಕೋಳ್ಯೂರು ರಾಮಚಂದ್ರ ರಾವ್ ಅವರು ಯಕ್ಷಗಾನಕ್ಕೆ ಆರು ದಶಕಗಳ ಕೊಡುಗೆ ನೀಡಿದ್ದಾರೆ. ಪಾತ್ರದಲ್ಲಿ ಅತಿ ಹೆಚ್ಚು ಕಣ್ಣೀರು ಹಾಕಿದ ಪಾತ್ರವಿದ್ದರೆ ಅದು ಅವರಿಗೆ ಸಲ್ಲುತ್ತದೆ. ಸಂಘಟಕರಿಗೆ ಎಂದೂ ತೊಂದರೆ ನೀಡದೆ ನಿರಂತರವಾಗಿ ಯಕ್ಷಗಾನದ ಸೇವೆ ಮಾಡಿದವರು.-ಮುರಳೀ ಕಡೆಕಾರ್, ಕಾರ್ಯದರ್ಶಿ, ಉಡುಪಿ ಯಕ್ಷಗಾನ ಕಲಾರಂಗ