ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕುಚ್ಚೂರು ಗ್ರಾಪಂ ವ್ಯಾಪ್ತಿಯ ಕುಡಿಬೈಲು ಪರಿಸರದ ಗದ್ದೆ ಬಳಿಯ ತಡೆಗೋಡೆ ಅಲ್ಲಲ್ಲಿ ಕುಸಿದಿದ್ದು, ಮುಂದಿನ ದಿನಗಳಲ್ಲಿ ಗದ್ದೆಗೆ ಹಾನಿಯಾಗುವ ಲಕ್ಷಣವಿದ್ದು, ರೈತರನ್ನು ಸಂಕಷ್ಟಕೀಡುಮಾಡಿದೆ.
ಈ ಭಾಗದಲ್ಲಿ ಹತ್ತಾರು ಎಕರೆಯಲ್ಲಿ ಭತ್ತ ಬೆಳೆಯುವ ರೈತರಿದ್ದಾರೆ. ಮಳೆಗಾಲದಲ್ಲಿ ಭಾರಿ ಪ್ರಮಾಣದ ನೀರು ಹರಿಯುವುದರಿಂದ ಗದ್ದೆಗಳು ಜಲಾವೃತವಾಗುತ್ತದೆ. ಆ ನಿಟ್ಟಿನಲ್ಲಿ ತಡೆಗೋಡೆ ದುರಸ್ತಿಗೊಳಿಸಬೇಕಿದೆ. ಈ ವರ್ಷ ನಿರಂತರ ನೀರಿನ ಪರಿಣಾಮ ಬಹುತೇಕರ ಗದ್ದೆಗೆ ಹಾನಿಯಾಗಿದೆ. ಗದ್ದೆಗಳಲ್ಲಿ ನೇಜಿ ಕೊಳೆತ್ತಿದ್ದು, ಗದ್ದೆ ಬದು ಕೊಚ್ಚಿ ಹೋಗಿತ್ತು. ಸಾಂತುಕೋಡಿನ ಬಳಿ ತೋಡಿನ ಕಟ್ಟೆ ಒಡೆದು ನೀರು ಗದ್ದೆಯಲ್ಲಿ ಹರಿದು ಗದ್ದೆಯಲ್ಲಿ ಮರಳು ಶೇಖರಣೆಯಾಗಿದೆ. ಕಂಬಳ ಗದ್ದೆಯ ಸೇತುವೆ ಬಳಿ ತಡೆಗೋಡೆ ಕುಸಿಯುವ ಭೀತಿ ಇದೆ. ಸಳ್ಳೆಕಟ್ಟೆ ಹಾಗೂ ಮಾತ್ಕಲ್ ಸಂಪರ್ಕಿಸುವ ಕಿರು ಸೇತುವೆ ಹತ್ತಿರ ತಡಗೋಡೆ ಸಂಪೂರ್ಣವಾಗಿ ಕುಸಿದಿದೆ. ಈ ಭಾಗದ ಗದ್ದೆಗಳು ಎರಡು ಬದಿಯಲ್ಲಿ ತೋಡು ಆವರಿಸಿದೆ. ಒಂದು ಬದಿಯ ತೋಡನ್ನು ದಾನಿಯೊಬ್ಬರು ರಿಪೇರಿ ಮಾಡಿ ಕೊಟ್ಟಿದ್ದರು. ಇನ್ನೊಂದು ಬದಿಯ ತೋಡು ರಿಪೇರಿಯಾಗಬೇಕಿದ್ದು, ದುರಸ್ತಿಗೊಳಿಸುವಂತೆ ಸ್ಥಳೀಯ ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ತಡೆಗೋಡೆ ಸಂಪೂರ್ಣ ಕುಸಿದರೆ ಈ ಭಾಗದ ಕೃಷಿ ನಿಂತು ಹೋಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ತಡಗೋಡೆ ನಿರ್ಮಾಣ ವೇಳೆ ಸಮರ್ಪಕ ಯೋಜನೆ ರೂಪಿಸದೆ ಕಾಮಗಾರಿ ಮಾಡಿದ್ದಾರೆ. ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ನರೇಗಾದಲ್ಲಿ ತೋಡಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಸ್ಥಳೀಯರು ಅರ್ಜಿ ಸಲ್ಲಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.
ಕುಡಿಬೈಲು ಪರಿಸರದಲ್ಲಿ ಸದ್ಯಕ್ಕೆ ಪಂಚಾಯಿತಿ ವತಿಯಿಂದ ತುರ್ತಾಗಿ ಆಗಬೇಕಾದ ಕೆಲಸ ಮಾಡಿದ್ದೇವೆ. ಪರಿಶೀಲನೆ ಬಳಿಕ ಸಂಬಂಧಪಟ್ಟವರಿಗೆ ವರದಿ ನೀಡಲಾಗುವುದು. -ಶೀತಲ್ ಕುಚ್ಚೂರು, ಪಿಡಿಒ-ಶೀತಲ್ ಕುಚ್ಚೂರು, ಪಿಡಿಒ
ಕಳಪೆ ಕಾಮಗಾರಿಯಿಂದ ಸಮಸ್ಯೆಯಾಗಿದೆ. ಶೀಘ್ರದಲ್ಲಿ ಇದರ ಮರು ನಿರ್ಮಾಣ ಆಗಬೇಕು. ಈ ವರ್ಷ ಅಪಾರ ನಷ್ಟ ಉಂಟಾಗಿದ್ದು, ತೋಡಿಗೆ ತಡೆಗೋಡೆ ಒದಗಿಸಬೇಕು. -ಕೆ.ಗಣೇಶ್ ಕುಡಿಬೈಲ್, ಸ್ಥಳೀಯರು-ಕೆ.ಗಣೇಶ್ ಕುಡಿಬೈಲ್, ಸ್ಥಳೀಯರು