ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಆರ್ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರು ಚಾಲಕನ ವಿರುದ್ಧ ಬುಧವಾರ ಎಫ್ಐಆರ್ ದಾಖಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಎಸ್ಕಾರ್ಟ್ ಹಾಗೂ ಪೈಲೆಟ್ ವಾಹನ ಚಾಲಕ ಮತ್ತು ಕುಸುಮಾ ವಿರುದ್ಧ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಆರೋಪವೇನು?
ನಾಮಪತ್ರ ಸಲ್ಲಿಸುವ ಕಚೇರಿಯ 100 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬ್ಯಾರಿಕೇಡ್ ತೆಗೆದು ಕಾರುಗಳನ್ನು ನೂರು ಮೀಟರ್ ವ್ಯಾಪ್ತಿಯೊಳಗೆ ತೆಗೆದುಕೊಂಡು ಹೋದ ಆರೋಪ ಕೇಳಿಬಂದಿದೆ. ಐಪಿಸಿ ಸೆಕ್ಷನ್ 353 (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ) ಮತ್ತು 188 (ಸರ್ಕಾರಿ ಅಧಿಕಾರಿಯ ಆದೇಶ ಪಾಲಿಸದಿರುವುದು) ಅಡಿಯಲ್ಲಿ ದೂರು ದಾಖಲಾಗಿದೆ.
ಮಂಗಳವಾರವೇ ನಾಮಪತ್ರ ಸಲ್ಲಿಸಿದ್ದ ಕುಸುಮಾ, ಇಂದು ಬುಧವಾರ ಬೆಳಗ್ಗೆ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ತಂದೆ ಹನುಮಂತರಾಯಪ್ಪ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ನಾಗರಬಾವಿ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕುಸುಮಾ ಪೂಜೆ ಸಲ್ಲಿಸಿದ್ದರು. (ದಿಗ್ವಿಜಯ ನ್ಯೂಸ್)