ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮದವರ ಜತೆ ಮಾತನಾಡಿದರು. ಸಚಿವ ಪ್ರಿಯಾಂಕ್ ಖರ್ಗೆ, ಕೆಕೆಆರ್​ಡಿಬಿ ಅಧ್ಯಕ್ಷ ಅಜಯಸಿಂಗ್ ಇದ್ದರು. 
ಜಿಲ್ಲೆ

ಪರಿಹಾರಕ್ಕಿಲ್ಲ ಹಣದ ಬರ; ಪ್ರಧಾನಿಗೆ ಇನ್ನೊಂದು ಪತ್ರ

ಕಲಬುರಗಿ: ಬರ ಘೊಷಿಸಿರುವ 161 ತಾಲೂಕುಗಳಲ್ಲಿ ಬೆಳೆ ಹಾನಿಗೆ ನಿಯಮದಂತೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಂಡು ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯತಿಳಿಸಿದರು.

ನಗರದಲ್ಲಿ ಭಾನುವಾರ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆಗೆ ಸೂಚಿಸಲಾಗಿದ್ದು, ಹಾನಿ ಎಷ್ಟಾಗಿದೆ ಎಂಬುದು ಗೊತ್ತಾದ ಬಳಿಕ ಎಷ್ಟು ಪರಿಹಾರ ನೀಡಬೇಕು ಎಂಬುದು ಸ್ಪಷ್ಟವಾಗಲಿದೆ ಎಂದರು.

ಬರ ಪರಿಸ್ಥಿತಿ ನಿರ್ವಹಿಸಲು ನೆರವು, ಎನ್​ಡಿಆರ್​ಎಫ್ ನಿಯಮ ಬದಲಾವಣೆ ಮತ್ತು ಮಹದಾಯಿ, ಕೃಷ್ಣಾ, ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸಲು ಗೆಜೆಟ್​ನಲ್ಲಿ ಪ್ರಕಟಿಸುವುದು ಸೇರಿ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ನವದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ಎಷ್ಟು ಪರಿಹಾರ ಕೇಳಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ. ಆದರೆ ಗ್ಯಾರಂಟಿ ಯೋಜನೆಗಳಿಂದ ಬರ ಪರಿಹಾರ ಕಾರ್ಯಕ್ಕೆ ಯಾವುದೇ ಸಮಸ್ಯೆಯಾಗಲ್ಲ. ಹಣದ ಕೊರತೆಯೂ ಇಲ್ಲ ಎಂದು ಹೇಳಿದರು.

ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ: ಎನ್​ಡಿಆರ್​ಎಫ್ ಮತ್ತು ಎಸ್​ಡಿಆರ್​ಎಫ್ ಮಾನದಂಡಗಳನ್ನು ಬದಲಿಸುವಂತೆ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆಯಲಾಗಿದೆ. ಸರ್ವಪಕ್ಷ ನಿಯೋಗ ಭೇಟಿಗೆ ಸಮಯ ನೀಡುವಂತೆ ಪತ್ರ ಬರೆದು ತಿಂಗಳಾದರೂ ಪ್ರಧಾನಿಯಾಗಲಿ, ಅವರ ಕಚೇರಿಯಿಂದಾಗಲಿ ಸಮಯ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತ್ತೊಮ್ಮೆ ಪತ್ರ ಬರೆದು ಸಮಯ ನೀಡಲು ಕೋರಲಾಗುವುದು. 25 ಬಿಜೆಪಿ ಸಂಸದರಿದ್ದರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು. ಬರ ಪರಿಹಾರದ ತುರ್ತು ಕೆಲಸಗಳಿಗೆ 20 ಕೋಟಿ ರೂ. ನೀಡಲಾಗಿದೆ. 161 ತಾಲೂಕುಗಳಲ್ಲಿ ತೀವ್ರ, 34ರಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ. ಒಟ್ಟಾರೆ 195 ತಾಲೂಕುಗಳನ್ನು ಬರಪೀಡಿತವೆಂದು ಘೊಷಿಸಲಾಗಿದೆ ಎಂದರು. ಕೆಕೆಆರ್​ಡಿಬಿಯಲ್ಲಿ ಹಿಂದೆ ನಡೆದ ಅವ್ಯವಹಾರ ಕುರಿತು ಪ್ರಾಥಮಿಕ ತನಿಖಾ ವರದಿ ಬಂದಿದೆ. ಹಿರಿಯ ಅಧಿಕಾರಿಗಳಿಂದ ಇನ್ನೊಂದು ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗ್ಯಾರಂಟಿಗಳಿಂದ ಪ್ರಭಾವಿತಗೊಂಡ ತೆಲಂಗಾಣ, ರಾಜಸ್ಥಾನಗಳಲ್ಲೂ ಗೃಹಲಕ್ಷ್ಮಿ ಜಾರಿಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹೊಸ ವಿವಿ ಜನಪರ ನಿರ್ಣಯವಲ್ಲ

ಹಿಂದಿನ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ತರಾತುರಿಯಲ್ಲಿ ಘೊಷಿಸಿದ 8 ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ನಿರ್ಧಾರ ಜನಪರವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ಏನು ಮಾಡಬೇಕು ಎಂದು ಚರ್ಚೆ ನಡೆಸಲಾಗುತ್ತಿದೆ. ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ಇರುವ ವಿವಿಗಳನ್ನೇ ಬಲಗೊಳಿಸಿ ಅಗತ್ಯ ಸವಲತ್ತು ಕಲ್ಪಿಸಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲಾಗುವುದು ಎಂದರು.

ಧರ್ಮದ ವಿರುದ್ಧ ಇಲ್ಲ

ಐಎನ್​ಡಿಐಎ ಒಕ್ಕೂಟ ಯಾವುದೇ ಧರ್ಮದ ವಿರುದ್ಧವಿಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ ಎಂದ ಸಿದ್ದರಾಮಯ್ಯ, ಧರ್ಮ ಎಂದರೆ ಬದುಕಿನ ದಾರಿ. ಜನರಿಗಾಗಿ ಧರ್ಮವಿರುವುದು, ಧರ್ಮಕ್ಕಾಗಿ ಜನರಲ್ಲ. ದಯೆಯೇ ಧರ್ಮದ ಮೂಲ ಎಂದು ಬಸವಾದಿ ಶರಣರು ಹೇಳಿದ್ದಾರೆ. ಬಿಜೆಪಿ ಅವರಿಗೆ ಸುಳ್ಳು ಹೇಳುವುದೇ ಕಾಯಕವಾಗಿದೆ ಟೀಕಿಸಿದರು.

ಉಕ್ಕಿನ ಮನುಷ್ಯ ಪಟೇಲ್​ಗೆ ಗೌರವ ಸಲ್ಲಿಕೆ

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ನಿಮಿತ್ತ ಸಿಎಂ ಸಿದ್ದರಾಮಯ್ಯ ಎಸ್​ವಿಪಿ ವೃತ್ತದಲ್ಲಿರುವ ಹೈದರಾಬಾದ್ ಕರ್ನಾಟಕ ವಿಮೋಚನಾ ರೂವಾರಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹೈದರಾಬಾದ್​ನಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ ನಗರಕ್ಕೆ ಆಗಮಿಸಿದ ಸಿಎಂ ನೇರವಾಗಿ ಪಟೇಲ್ ಪ್ರತಿಮೆ ಇರುವ ಸರ್ಕಲ್​ಗೆ ತೆರಳಿ ಗೌರವ ಸಲ್ಲಿಸಿದರು. ಬಳಿಕ ಪೊಲೀಸ್ ಮೈದಾನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ಕವಾಯತು ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಆರೋಗ್ಯ ಮಿತ್ರ ಹೆಲ್ತ್ ಎಟಿಎಂ ಸೇರಿ ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದರು. ಕೆಕೆಆರ್​ಡಿಬಿಯಿಂದ ವಿವಿಧೆಡೆ 146 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಹಾಸ್ಟೆಲ್ ಇತರ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದರು. ಲೋಕೋಪಯೋಗಿ ಇಲಾಖೆಯ 185 ಕೋಟಿ ರೂ. ಮೊತ್ತದ ಯೋಜನೆಗಳಿಗೂ ಸಿಎಂ ಚಾಲನೆ ನೀಡಿದರು.

ಕಾವೇರಿ ನೀರು ಸುಪ್ರೀಂ ಮೊರೆಗೆ ಚಿಂತನೆ

ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುವಂತೆ ನಿರ್ವಹಣಾ ಸಮಿತಿ ಆದೇಶಿಸಿದೆ. ಆದರೆ ಬಿಡಲು ನಮ್ಮಲ್ಲೇ ನೀರಿಲ್ಲ. ಈ ಕುರಿತು ಸುಪ್ರೀಂ ಮೊರೆ ಹೋಗಲು ಚಿಂತನೆ ನಡೆದಿದೆ. ಬಿಜೆಪಿ ಹಾಗೂ ಬಿ.ಎಸ್. ಯಡಿಯೂರಪ್ಪ ಸುಖಾಸುಮ್ಮನೆ ಕಾವೇರಿ ವಿಚಾರವಾಗಿ ಆರೋಪ ಮಾಡುತ್ತಿದ್ದಾರೆ ಎಂದ ಸಿದ್ದರಾಮಯ್ಯ, ಮಹದಾಯಿ ಯೋಜನೆ ಗೆಜೆಟ್​ನಲ್ಲಿ ಪ್ರಕಟಿಸ ಲಾಗಿದೆ. ಆದರೆ ಅರಣ್ಯ ಮತ್ತು ಪರಿಸರ ನಿರಾಕ್ಷೇಪಣೆ ಪತ್ರ ನೀಡಿಲ್ಲ. ಕೃಷ್ಣಾ ನೀರು, ಮೇಕೆದಾಟು ಕುರಿತು ಗೆಜೆಟ್ ಪ್ರಕಟಿಸಿ ದರೆ ತಕ್ಷಣವೇ ಕಾಮಗಾರಿ ಆರಂಭಿ ಸಲಾಗುವುದು ಎಂದು ತಿಳಿಸಿದರು.

3 ಡಿಸಿಎಂ ಹೈಕಮಾಂಡ್​ಗೆ ಬಿಟ್ಟಿದ್ದು

ಮೂವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ವಿಷಯದಲ್ಲಿ ಹೈಕಮಾಂಡ್ ತೀರ್ವನವೇ ಅಂತಿಮ ಎಂದು ತಿಳಿಸಿದ ಸಿದ್ದರಾಮಯ್ಯ, ವರಿಷ್ಠರು ಒಬ್ಬರನ್ನು ಡಿಸಿಎಂ ಮಾಡಿದ್ದು, ಅವರೊಬ್ಬರೇ ಇರುತ್ತಾರೆ. ಈ ಕುರಿತು ಸಚಿವ ಕೆ.ಎನ್.ರಾಜಣ್ಣ ವರಿಷ್ಠರೊಂದಿಗೆ ಮಾತನಾಡುವುದಾಗಿ ಹೇಳಿದ್ದು, ಮಾತನಾಡಲಿ. ನಂತರ ಹೈಕಮಾಂಡ್ ಹೇಳಿದಂತೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.