ಜಿಲ್ಲೆ

ಮುಖ್ಯಮಂತ್ರಿಗಳ ದೇಣಿಗೆಯನ್ನ ಪ್ರಶ್ನೆ ಮಾಡಿದ್ದಕ್ಕೆ ಸೊರಬದ ಇಬ್ಬರು ಶಿಕ್ಷಕರು ಅಮಾನತು!

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳು ಕೇಳಿರುವ ದೇಣಿಗೆಯನ್ನ ಪ್ರಶ್ನೆ ಮಾಡಿರುವುದಕ್ಕೆ ಸೊರಬ ಶಿಕ್ಷಕರಿಬ್ಬರನ್ನ ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಸೊರಬ ತಾಲೂಕಿನ ತಿಮ್ಮಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಢಾಕ್ಯಾನಾಯ್ಕ ಹಾಗೂ ಆನವಟ್ಟಿಯ ಸಿಆರ್​ಸಿ ರಾಜು ಇವರನ್ನ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿಯವರು ಅಮಾನತ್ತಿನಲ್ಲಿರುವಂತೆ ಆದೇಶಿಸಿದ್ದಾರೆ.

ಸಿಆರ್​ಸಿ ಆನವಟ್ಟಿ ಟೀಚರ್ಸ್ ಫ್ರೈಂಡ್ಸ್ ವಾಟ್ಸಪ್ ಗ್ರೂಪ್​​​ನಲ್ಲಿ ಢಾಕ್ಯಾನಾಯ್ಕ್ ರವರು ಕರೊನ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದೇಣಿಗೆ ನೀಡುವಂತೆ ಸಾರ್ವಜನಿಕರನ್ನ ಕೋರಿದ್ದನ್ನು ಗೇಲಿ ಮಾಡಿ “ಹಲೋ ಸಿಎಂ ಸಾಹೇಬ್ರೆ ಕೊರೋನ ಪರಿಹಾರಕ್ಕೆ ಜನರ ಬಳಿ ಹಣ ಕೇಳಿದ್ದೀರಿ ಹಣದ ಲೀಸ್ಟ್ ಇಲ್ಲಿದೆ ನೋಡಿ” ಎಂದು ವಾಯ್ಸ್ ರೆಕಾರ್ಡ್ ಅನ್ನು ಫಾರ್ವರ್ಡ್ ಮಾಡಿದ್ದರು. ಇದಕ್ಕೆ ರಾಜುರವರು ರಿಯಲಿ ರೈಟ್ ಸಾರ್ ಎಂದು ಕಾಮೆಂಟ್ ಮಾಡಿದ್ದರು.

ಈ ಶಿಕ್ಷಕರುಗಳಿಗೆ ಕರೊನ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕುಳಿತು ಸರ್ಕಾರ ವಹಿಸುವ ಕೆಲಸವನ್ನ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ಕಾಮೆಂಟ್ಸ್ ಮಾಡುವುದನ್ನ ಆಕ್ಷೇಪಿಸಿದೆ. ಇವರನ್ನ ಕರ್ನಾಟಕ ನಾಗರೀಕ ಸೇವ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮ 1957, ಕರ್ನಾಟಕ ಸರ್ಕಾರಿ ನೌಕರರ (ವರ್ತನೆ) ನಿಯಮಗಳು 1966 ರ ನಿಯಮ 10 ಮತ್ತು 12 ನ್ನ ಉಲ್ಲಂಘಿಸಿರುವುದರಿಂದ ಅಮಾನತು ಗೊಳಿಸಲಾಗಿದೆ.