ಜಿಲ್ಲೆ

ಲಿಂಗಾಯತ ಸಮಾಜ ಒಡೆಯಲು ಹೊರಟವರಿಗೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ: ಸಿಎಂ ಬೊಮ್ಮಾಯಿ ವಾಗ್ದಾಳಿ

Webdesk - Manjunatha B

ಮುಧೋಳ: ಲಿಂಗಾಯತರನ್ನು ಕಡೆಗಣಿಸುತ್ತಾ ಬಂದಿರುವ ಕಾಂಗ್ರೆಸ್​ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ವಾಗ್ದಾಳಿ ನಡೆಸಿದ್ಧಾರೆ.

ಬಾಗಲಕೋಟೆಯ ಮುಧೋಳದಲ್ಲಿ ಮಂಗಳವಾರ ಸಚಿವ ಗೋವಿಂದ ಖಾರಜೋಳ ನಾಮಪತ್ರ ಸಲ್ಲಿಕೆಗೂ ಮುನ್ನ ಮಾತನಾಡಿದ ಅವರು ಕಾಂಗ್ರೆಸ್​​ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಮಾತನಾಡುವ ನೈತಿಕತೆ ಇಲ್ಲ

ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸ್​ಗೆ ಲಿಂಗಾಯತರು ನೆನಪಾಗುತ್ತಾರೆ. 1967ರ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್​ ಲಿಂಗಾಯತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ವೀರೇಂದ್ರ ಪಾಟೀಲ್​ ಅವರಿಗೆ ಅಪಮಾನ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು.

ಲಿಂಗಾಯತ ನಾಯಕರ ಮೇಲೆ ಅಷ್ಟು ಪ್ರೀತಿ ಇರುವವರು ನಿಮ್ಮ ಪಕ್ಷದ ನಾಯಕರಾದ ಎಸ್​.ಆರ್​. ಪಾಟೀಲ್​ ಅವರನ್ನು ಯಾಕೆ ಕಡೆಗಣಿಸುವ ಮೂಲಕ ಯಾಕೆ ಮೂಲೆಗುಂಪು ಮಾಡಿದ್ದೀರಾ ಎಂದು ಪ್ರಶ್ನಿಸಿದ್ಧಾರೆ.

ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ

2018ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಲಿಂಗಾಯತ ಸಮಾಜವನ್ನು ಒಡೆಯಲು ಹೊರಟಿದ್ದವರಿಗೆ ಈಗ ಪ್ರೀತಿ ಉಕ್ಕಿ ಹರಿಯುತ್ತಿದೆ. 2009ರಲ್ಲಿ ಲಿಂಗಾಯತರಿಗೆ 2A ಮೀಸಲಾತಿ ಸಲುವಾಗಿ ಪ್ರಸ್ಥಾವನೆಯನ್ನು ಸಲ್ಲಿಸಲಾಗಿತ್ತು. ಆದರೆ, ಕೇಂದ್ರದಲ್ಲಿ ಇದ್ದ ಕಾಂಗ್ರೆಸ್​ ಸರ್ಕಾರ ಅದನ್ನು ಕಾಂಗ್ರೆಸ್​ ತಿರಸ್ಕರಿಸಿತ್ತು ಎಂದು ಆರೋಪಿಸಿದ್ದಾರೆ.

ನಮ್ಮ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ಬಿಜೆಪಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ. ಕೃಷ್ಣ ಮೇಲ್ದಂಡೆ ಯೋಜನೆ ಹಿನ್ನಡೆಗೂ ಕಾಂಗ್ರೆಸ್​ ಅವರೇ ಕಾರಣ ಎಂದು ಕಿಡಿಕಾರಿದ್ದಾರೆ.

ಪಕ್ಷಕ್ಕೇನೂ ನಷ್ಟ ಇಲ್ಲ

ಇನ್ನು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ಕಾಂಗ್ರೆಸ್​ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿ ಇದರಿಂದ ಪಕ್ಷಕ್ಕೆ ಯಾವುದೇ ನಷ್ಟ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಜಗದೀಶ್​ ಶೆಟ್ಟರ್​ಗೆ ಟಿಕೆಟ್​ ತಪ್ಪಲು ಬಿ.ಎಲ್​.ಸಂತೋಷ್ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಅವರು ಮಾಡಿರುವ ಆರೋಪ ಸರಿ ಅಲ್ಲ ಎಂದು ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.