ಜಿಲ್ಲೆ

ಜನ ಬಲವಿಲ್ಲದ ಕಾಂಗ್ರೆಸ್​​ನಿಂದ ಹಣ ಬಲದ ಹುನ್ನಾರ: ಸಿಎಂ ಬೊಮ್ಮಾಯಿ‌ ವಾಗ್ದಾಳಿ

ಬೆಂಗಳೂರು: ಜನ ಬಲವಿಲ್ಲದ ಕಾಂಗ್ರೆಸ್ ಪಕ್ಷ ಹಣ ಬಲದಿಂದ ಗೆಲ್ಲುವ ಹುನ್ನಾರ ಹೂಡಿದೆ‌. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಆ ಪಕ್ಷದ ನಿಜ ಬಣ್ಣ ಬಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್​​ನಲ್ಲಿ ಬಿಜೆಪಿ ಇಂದು ಏರ್ಪಡಿಸಿದ್ದ 'ವಿಜಯಸಂಕಲ್ಪ ಸಮಾವೇಶ'ದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಬಿಜೆಪಿ ತೋಳ್ಬಲ,‌ ಹಣ ಬಲದಿಂದ ಅಧಿಕಾರಕ್ಕೆ ಬಂದಿದೆ ಎನ್ನುತ್ತಿದ್ದಾರೆ. ವಿಧಾನ ಪರಿಷತ್ ಬೆಂಗಳೂರು ನಗರ ಕ್ಷೇತ್ರದ ಚುನಾವಣೆಯಲ್ಲಿ ಅವರು ಏನು ಮಾಡಲು ಹೊರಟಿದ್ದಾರೆ. ಹಣ ಬಲಕ್ಕೆ ಮಣೆ ಹಾಕಿ, ಅಂತಹ ಅಭ್ಯರ್ಥಿಯನ್ನೇ ಸ್ಪರ್ಧೆಗೆ ಇಳಿಸಿದ್ದಾರೆ. ಹೇಗಾದರೂ ಮಾಡು,‌ ಹಣವನ್ನಾದರೂ ಚೆಲ್ಲು ಎಂಬ ನಿಲುವು ತಳೆದಿರುವ ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದರು.

ಪೊಳ್ಳು ಘೋಷಣೆ: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೋಟ್ಯಂತರ ರೂ.ಗಳ ವಸತಿ ಯೋಜನೆ ಘೋಷಿಸಿತು. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಇನ್ನೂ ಮೂರು ತಿಂಗಳಿರುವಾಗ ಅಗತ್ಯ ಹಣ ಕಾದಿಡದೆ ಪೊಳ್ಳು ಯೋಜನೆ ಪ್ರಕಟಿಸಿತು. ಹೇಗಿದ್ದರೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಮುಂದೆ ಬಂದವರು ಅನುಭವಿಸಲೆಂದು ಅಗ್ಗದ ಜನಪ್ರಿಯತೆ‌ಗೆ ಜೋತು ಬಿದ್ದಿತು ಎಂದು ಬೊಮ್ಮಾಯಿ‌ ಹರಿಹಾಯ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಸತಿ ಯೋಜನೆಯ ಅವ್ಯವಸ್ಥೆಯನ್ನು ಸರಿಪಡಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ಲಕ್ಷ, ನಗರ-ಪಟ್ಟಣಗಳಲ್ಲಿ ಒಂದು ಲಕ್ಷ ಮನೆಗಳನ್ನು ಒಂದೂವರೆ ವರ್ಷದಲ್ಲಿ ಕಟ್ಟುವ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ನಗರದ ಆಸುಪಾಸಿನ ಗ್ರಾಮ ಪಂಚಾಯಿತಿ ವಾರ್ಡ್​​ಗಳನ್ನು ಪಾಲಿಕೆ ವಾರ್ಡ್​​ಗಳ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದೇ ರೀತಿ ಗ್ರಾ.ಪಂ.ಗಳ ನೆಲೆಯೂರುವ ಉದ್ಯಮಗಳಿಂದ ಸಂಗ್ರಹಿತ ತೆರಿಗೆಯನ್ನು ಆಯಾ ಗ್ರಾ.ಪಂ. ಅಭಿವೃದ್ಧಿ ಕಾರ್ಯಗಳಿಗೇ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ‌ ಭರವಸೆ ನೀಡಿದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು. ಸಚಿವ ಬೈರತಿ ಬಸವರಾಜ, ಶಾಸಕರಾದ ಕೃಷ್ಣಪ್ಪ, ಸತೀಶ್ ರೆಡ್ಡಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.