ಜಿಲ್ಲೆ

ಪತ್ರಕರ್ತರಿಗೆ ಉಡುಗೊರೆ, ಕಾಂಗ್ರೆಸ್​ನ ಅಪಪ್ರಚಾರದ ಟೂಲ್ ಕಿಟ್: ಸಿಎಂ ಬೊಮ್ಮಾಯಿ‌ ವಾಗ್ದಾಳಿ

ಬೆಂಗಳೂರು: ಎಲ್ಲ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ಉಡುಗೊರೆ ನೀಡಲಾಗಿದೆ ಎನ್ನುವುದು ಕಾಂಗ್ರೆಸ್​ನ ಅಪಪ್ರಚಾರದ ಟೂಲ್ ಕಿಟ್. ಸುಳ್ಳು ಹೇಳುವ ಮೂಲಕ ಎಲ್ಲ ಪತ್ರಕರ್ತರಿಗೆ ಅವಮಾನಿಸಿರುವುದನ್ನು ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಪತ್ರಕರ್ತರಿಗೆ ಉಡುಗೊರೆ ನೀಡಬೇಕೆಂದು ನಾನಂತೂ ಯಾರಿಗೂ ಸೂಚನೆ ನೀಡಿಲ್ಲ. ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ತನಿಖೆಯಿಂದ ಏನೆಂಬುದು ಗೊತ್ತಾಗಲಿದೆ ಎಂದರು.

ನೈತಿಕತೆ ಎಲ್ಲಿದೆ ?

ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಏನು ಮಾಡಿದರು ಎಂಬುದು ಗೊತ್ತಿದೆ. ಕೆಲವರಿಗೆ ಐಫೋನ್, ಲ್ಯಾಪ್‌ಟಾಪ್, ಬಂಗಾರದ ನಾಣ್ಯ ಗಿಫ್ಟ್ ಕೊಟ್ಟಿದ್ದರು. ಈಗ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದು, ನೈತಿಕತೆ ಎಲ್ಲಿದೆ ? ಎಂದು ಸಿಎಂ ಬೊಮ್ಮಾಯಿ‌ ಕೇಳಿದರು.

ಇತರೆ ಹಿಂದುಳಿದ ವರ್ಗಗಳು ಬಿಜೆಪಿ ಬೆನ್ನಿಗೆ ನಿಂತಿರುವ ಸಂಕೇತವಾಗಿ ಕಲಬುರಗಿಯಲ್ಲಿ ಇಂದು ಒಬಿಸಿ ಮೋರ್ಚಾ ಸಮಾವೇಶ ನಡೆಯುತ್ತಿದ್ದು, ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಾದ ಬಳಿಕ ಎಸ್​ಟಿ, ಎಸ್​ಸಿ ಮೋರ್ಚಾ ಸಮಾವೇಶಗಳು ನಡೆಯಲಿವೆ. ಡಿಸೆಂಬರ್ ತಲಾ ಎರಡು ಸಮಾವೇಶಗಳನ್ನು ಆಯೋಜಿಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ‌ ವಿವರಿಸಿದರು.