ಬೆಂಗಳೂರು: ಜನರ ಮತ್ತು ನ್ಯಾಯಪರವಾಗಿ ಕೆಲಸ ಮಾಡಬೇಕಿದ್ದ ಪೊಲೀಸರೇ, ಕ್ಲಬ್, ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವರು ಯಾರು? ಎಂದು ಬಿಜೆಪಿಯ ಎಚ್.ವಿಶ್ವನಾಥ್ ಗೃಹಸಚಿವರಿಗೆ ಖಾರವಾಗಿ ಪ್ರಶ್ನಿಸಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ, ಜಾಗ ಒತ್ತುವರಿ ಮಾಡಿಕೊಂಡು ಮೈಸೂರಿನಲ್ಲಿರುವ ಪೊಲೀಸ್ ಭವನ ನಿರ್ಮಾಣ ಕುರಿತು ಮಾತು ಆರಂಭಿಸಿದ ವಿಶ್ವನಾಥ್, ಪೊಲೀಸರು ಕ್ಲಬ್, ಕಲ್ಯಾಣ ಮಂಟಪ, ಸ್ಕೂಲ್, ರಿಯಲ್ ಎಸ್ಟೇಟ್ ಚಟುವಟಿಕೆಗಳಲ್ಲಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಇವರೇ ಈ ರೀತಿ ಮಾಡಿದರೆ, ಇವರನ್ನು ಪ್ರಶ್ನೆ ಮಾಡುವುದು ಯಾರು? ಮೈಸೂರಿನಲ್ಲಿ ಭೂ ಕಬಳಿಕೆ ಮಾಡಿಕೊಂಡು ಕಲ್ಯಾಣ ಮಂಟಪ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ತೆರಿಗೆ ಪಾವತಿಸುತ್ತಿಲ್ಲ. ತೆರಿಗೆ ವಿನಾಯಿತಿ ತೆಗೆದುಕೊಂಡು ಸರ್ಕಾರಕ್ಕೆ ಬರಬೇಕಾದ ಆದಾಯ ನಷ್ಟ ಮಾಡಿದ್ದಾರೆ. ಈ ಎಲ್ಲ ಕೃತ್ಯಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಏಕೆ? ಕ್ರಮವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವ ಜಿ.ಪರಮೇಶ್ವರ, ಮೈಸೂರಿನ ವೆಲ್ಫೇರ್ ಟ್ರಸ್ಟ್ನಿಂದ ನಡೆದಿರುವ ಹಣದ ಅವ್ಯವಹಾರ, ಭೂ ಒತ್ತುವರಿ ಪ್ರಕರಣ ಕುರಿತು ತನಿಖೆ ನಡೆಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ಸಮಿತಿಯ ವರದಿ ಆಧಾರದ ಮೇರೆಗೆ ಕ್ರಮಕೈಗೊಳ್ಳುತ್ತೇನೆ.2001ರಿಂದ 2017ರವರೆಗೆ 11 ಕೋಟಿ ರೂ.ಆದಾಯ ತೆರಿಗೆ ಕಟ್ಟಿಲ್ಲ. 2018ರಿಂದ ಟ್ರಸ್ಟ್ನವರು ತೆರಿಗೆ ಸೇರಿ ಜಿಎಸ್ಟಿ ಕಟ್ಟುತ್ತಿದ್ದಾರೆ ಎಂದರು.