ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸುರುಳಿಮೂಲೆಯಲ್ಲಿ ಸಾರ್ವಜನಿಕ ವ್ಯವಸ್ಥೆಗಳಿಗಾಗಿ ಗ್ರಾಮ ಪಂಚಾಯಿತಿ ಕಾಯ್ದಿರಿಸಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ಶನಿವಾರ ಜೆಸಿಬಿ ಮೂಲಕ ತೆರವುಗೊಳಿಸಿ ವಿವಾದಕ್ಕೆ ಮುಕ್ತಾಯ ಹಾಡಲಾಗಿದೆ.
ಅತಿಕ್ರಮಣ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಓಣಿಯಡ್ಕ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ಟರ್ಪಾಲ್ ಹೊದಿಕೆಯ ಜೋಪಡಿ ತಲೆಎತ್ತಿದ ಬೆನ್ನಲ್ಲೇ ಮಸೀದಿ ಕಮಿಟಿಯವರು ಆ ಸ್ಥಳ ಮಸೀದಿಯ ದಫನ ಭೂಮಿ ಎಂದು ವಾದಕ್ಕಿಳಿದು ದೂರು ನೀಡಿದ್ದ ಕಾರಣ ಇಲ್ಲಿ ವಿವಾದ ಸೃಷ್ಟಿಯಾಗಿತ್ತು. ಶನಿವಾರ ತಹಸೀಲ್ದಾರ್ ನೇತೃತ್ವದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಶನಿವಾರ ನಡೆದ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸುರುಳಿಮೂಲೆಯಲ್ಲಿ ಸರ್ಕಾರಿ ಸ್ಥಳದ ಅತಿಕ್ರಮಣಗಳ ವಿಚಾರವಾಗಿ ಚರ್ಚೆ ನಡೆದು ಸರ್ಕಾರಿ ಜಾಗದಲ್ಲಿ ನಡೆದ ಅತಿಕ್ರಮಣಗಳೆಲ್ಲವನ್ನೂ ತೆರವುಗೊಳಿಸುವುದೆಂಬ ತೀರ್ಮಾನ ಕೈಗೊಳ್ಳಲಾಯಿತು. ಸಭೆ ನಡೆಯುತ್ತಿರುವಾಗಲೇ ತಹಸೀಲ್ದಾರ್ ಪುರಂದರ ಹೆಗ್ಡೆ ಪಿಡಿಒಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು, ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸುರುಳಿಮೂಲೆಗೆ ಬಂದು ಸರ್ಕಾರಿ ಸ್ಥಳದ ಸರ್ವೇ ಕಾರ್ಯ ಆರಂಭಿಸಿದರು. ಸಂಪ್ಯ ಠಾಣೆಯ ಪೊಲೀಸರು ಬಿಗುಬಂದೋಬಸ್ತ್ ಒದಗಿಸಿದ್ದರು.
ಸಬ್‌ಸ್ಟೇಷನ್, ಅಂಗನವಾಡಿ ಕೇಂದ್ರ ಮೊದಲಾದ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ ಜಾಗದಲ್ಲಿ ಅಬ್ದುಲ್ ರಹೀಂ ಎಂಬವರು ನಿರ್ಮಿಸಿಕೊಂಡಿದ್ದ ಎರಡು ಕೊಠಡಿಗಳನ್ನೊಳಗೊಂಡ ಕೆಂಪುಕಲ್ಲಿನ ಗೋಡೆಯ ಶೀಟ್ ಅಳವಡಿಸಿದ ಅಂಗಡಿ, ಶಶಿಧರ ಪೂಜಾರಿ ಎಂಬುವರು ನಿರ್ಮಿಸಿದ್ದ ಕಲ್ಲಿನ ಗೋಡೆಯ ಶೀಟ್ ಅಳವಡಿಸಿದ್ದ ಸಣ್ಣ ಮನೆಯನ್ನು ಬೆಸಿಬಿ ಮೂಲಕ ತೆರವುಗೊಳಿಸಲಾಯಿತು. ಮಸೀದಿಯ ದಫನಭೂಮಿ ಜಾಗ ಎಂಬ ವಿವಾದಿತ ಸ್ಥಳದಲ್ಲಿದ್ದ ಜೋಪಡಿಯ ತೆರವು ಕಾರ್ಯವೂ ನಡೆಯಿತು. ಕಟ್ಟಡಗಳಿಗೆ ಬಳಸಿದ್ದ ಶೀಟು, ಕಲ್ಲುಗಳು ಹಾಗೂ ಇನ್ನಿತರ ವಸ್ತುಗಳನ್ನು ಸಂಬಂಧಪಟ್ಟವರು ತೆಗೆದುಕೊಂಡು ಹೋಗುವಂತೆ ಸೂಚಿಸಲಾಯಿತು.
ತೆರವು ಕಾರ್ಯಾಚರಣೆಯಲ್ಲಿ ಸರ್ವೇಯರ್ ಮೋಹನ್, ಕಂದಾಯ ನಿರೀಕ್ಷಕ ಗೋಪಾಲ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು. ರೈತ ಸಂಘ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು, ಮಸೀದಿ ಕಮಿಟಿಯವರು ಹಾಗೂ ಸ್ಥಳೀಯರು ಈ ಕಾರ್ಯಾಚರಣೆ ವೇಳೆ ಹಾಜರಿದ್ದರು.
ಜೋಪಡಿ ಇದ್ದದ್ದು ದಫನ ಭೂಮಿಯಲ್ಲಲ್ಲ
ಮಸೀದಿಯ ದಫನ ಭೂಮಿ ಜಾಗದಲ್ಲಿ ಜೋಪಡಿ ನಿರ್ಮಿಸಿದ್ದಾರೆ ಎಂಬ ಮಸೀದಿ ಕಮಿಟಿಯವರ ವಾದ ಗೊಂದಲ ಸೃಷ್ಟಿಗೆ ಕಾರಣವಾಗಿತ್ತು. ಆದರೆ ಶನಿವಾರ ನಡೆದ ಸರ್ವೇಯ ವೇಳೆ ಆ ಸ್ಥಳ ಸರ್ಕಾರಿ ಭೂಮಿ ಎಂಬುದು ಖಚಿತಗೊಂಡಿತು. ಮಸೀದಿಗೆ ಸೇರಿದ 15 ಸೆಂಟ್ಸ್ ದಫನ ಭೂಮಿ ಜಾಗ ಮಸೀದಿಯ ಹಿಂಭಾಗದಲ್ಲಿದೆ ಎಂಬ ನಿರ್ಧಾರಕ್ಕೆ ಬರಲಾಯಿತು. ದಫನ ಭೂಮಿಯ ಸರ್ವೇ-ಗಡಿಗುರುತಿಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಮಸೀದಿ ಕಮಿಟಿಯವರಿಗೆ ಸೂಚಿಲಾಯಿತು.
ಘಟನೆಯ ಹಿನ್ನಲೆ
ಸುರುಳಿಮೂಲೆಯಲ್ಲಿರುವ ಸುಮಾರು 2 ಎಕರೆಯಷ್ಟು ಸರ್ಕಾರಿ ಜಾಗವನ್ನು ಮೆಸ್ಕಾಂ ಸಬ್‌ಸ್ಟೇಷನ್, ಅಂಗನವಾಡಿ ಕೇಂದ್ರ, ಪಂಚಾಯಿತಿ ಸಂಜೀವಿನಿ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆಂದು ಕಾಯ್ದಿರಿಸಲಾಗಿತ್ತು. ಸಂಜೀವಿನ ಕಟ್ಟಡ ನಿರ್ಮಾಣ ಆಗಿತ್ತು. ಈ ಸರ್ಕಾರಿ ಜಾಗವನ್ನು ಇತ್ತೀಚೆಗೆ ಕೆಲವು ಸ್ಥಳೀಯರು ಅತಿಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿದ್ದರು. ಅತಿಕ್ರಮಣ ಮುಂದುವರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆಕ್ರೋಶದಿಂದ ಅಲ್ಲಿನ ಹಿಂದೂ ಸಂಘಟನೆಯ ಕಾರ್ಯಕರ್ತರೆನ್ನಲಾದ ಕೆಲವು ಮಂದಿ ಸ್ಥಳೀಯರು ಸೇರಿಕೊಂಡು ಅಲ್ಲಿನ ಖಾಲಿ ಇದ್ದ ಭಾಗದಲ್ಲಿ ಜೋಪಡಿ ಅಂಗಡಿ ನಿರ್ಮಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿ ಗೊಂದಲ ಸೃಷ್ಟಿಸಿತ್ತು. ಜೋಪಡಿ ನಿರ್ಮಿಸಿದ ಜಾಗ ದಫನ ಭೂಮಿ ಎಂದು ಮಸೀದಿಯ ಆಡಳಿತ ಕಮಿಟಿಯವರು ದೂರು ನೀಡಿದ್ದರು.