ಜಿಲ್ಲೆ

ತುಕ್ಕು ಹಿಡಿದ ಕಂಬಗಳ ತೆರವು

Avinash R

ಬಂಟ್ವಾಳ: ಕಾವಳಪಡೂರು ಗ್ರಾಮದ ಕಾರಿಂಜದಲ್ಲಿರುವ ಪರ್ವತ ಕ್ಷೇತ್ರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿದ್ದ ಹಳೆಯ ಕಾಲದ ತುಕ್ಕುಹಿಡಿದ ಕಬ್ಬಿಣದ ವಿದ್ಯುತ್ ಕಂಬಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ.

ಮೆಸ್ಕಾಂ ಅಧಿಕಾರಿಗಳು ಮತ್ತು ಲೈನ್‌ಮನ್‌ಗಳು ಬುಧವಾರ ಕಾರಿಂಜೇಶ್ವರ ಕ್ಷೇತ್ರಕ್ಕೆ ಆಗಮಿಸಿ, ಪ್ರಾರ್ಥನೆ ಸಲ್ಲಿಸಿ ನಂತರ ಸ್ಥಳ ಪರಿಶೀಲನೆ ನಡೆಸಿದ್ದರು. ಗುರುವಾರದಿಂದ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲು ಆರಂಭಿಸಿದ್ದಾರೆ.

ಕೆರೆ ಸಮೀಪದಿಂದ ಕಾಮಗಾರಿ ಆರಂಭ ಮಾಡಿದ್ದು ಈಶ್ವರ ದೇವರ ಗುಡಿವರೆಗೂ ಕಂಬಗಳನ್ನು ಬದಲಿಸಿದ್ದಾರೆ. ಹಳೆಯ ಕಬ್ಬಿಣದ ಕಂಬಗಳಿರುವ ಸನಿಹವೇ ಹೊಂಡ ತೆಗೆದು ಹೊಸ ಕಾಂಕ್ರೀಟ್ ಕಂಬಗಳನ್ನು ಅಳವಡಿಸಲಾಗಿದೆ. 60 ವರ್ಷಗಳ ಹಿಂದೆ ಅಳವಡಿಸಿರುವ ಕಬ್ಬಿಣದ ಕಂಬಗಳಿಗೆ ಮುಕ್ತಿ ಸಿಕ್ಕಿದ್ದು ವಾಲಿರುವ ಕಂಬ ಹಾಗೂ ಬುಡದಲ್ಲೇ ಬಿರುಕು ಬಿಟ್ಟಿರುವ ಕೆಲವು ಕಂಬಗಳನ್ನು ತುಂಡರಿಸಿ ತೆಗೆಯಲಾಗಿದೆ. ಕೆಲವೇ ದಿನಗಳಲ್ಲಿ ಹೊಸ ಕಂಬ,ತಂತಿ, ವಿದ್ಯುತ್ ದೀಪ ಅಳವಡಿಕೆಯಾಗಲಿದೆ. ಈ ಕಂಬಗಳ ಅಪಾಯದ ಬಗ್ಗೆ ವಿಜಯವಾಣಿ ಇತ್ತೀಚೆಗೆ ವರದಿ ಪ್ರಕಟಿಸಿತ್ತು.