ಜಿಲ್ಲೆ

ಪ್ರಕೃತಿ ಸ್ವಚ್ಛತೆ ಭಗವಂತನಿಗೆ ಪ್ರಿಯ: ರಾಧಾಕೃಷ್ಣ ನಾಯಕ್ ಬಣ್ಣನೆ

ಸೌಮ್ಯ ಆರ್

ಉಪ್ಪಿನಂಗಡಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯದ ನಿರ್ದೇಶನದನ್ವಯ ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬೃಹತ್ ಸ್ವಚ್ಛತಾ ಅಭಿಯಾನವನ್ನು ಮಂಗಳವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಉದ್ಘಾಟಿಸಲಾಯಿತು.

ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಪ್ರಕೃತಿ ಸ್ವಚ್ಛವಾಗಿರಿಸುವುದೇ ಭಗವಂತನಿಗೆ ಪ್ರಿಯವಾದ ಕಾರ್ಯವಾಗಿರುವುದರಿಂದ ಸ್ವಚ್ಛತಾ ಅಭಿಯಾನ ಬದುಕಿನ ಕಟ್ಟಕಡೆಯ ದಿನದವರೆಗೂ ನಡೆಯಬೇಕೆಂದರು.

ದೇವಳದ ವ್ಯವಸ್ಥಾಪನಾ ಸಮಿತಿಯ ಹಿರಿಯ ಸದಸ್ಯ ಕೃಷ್ಣ ರಾವ್ ಅರ್ತಿಲ ಮಾತನಾಡಿದರು. ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಧನಂಜಯ ನಟ್ಟಿಬೈಲು, ಪಿಡಿಒಗಳಾದ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಸತೀಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ದೇವಾಲಯದ ಪರಿಸರದಿಂದ ಪ್ರಾರಂಭಗೊಂಡ ಸ್ವಚ್ಛತಾ ಕಾರ್ಯ ಉಪ್ಪಿನಂಗಡಿಯ ಬಸ್ ನಿಲ್ದಾಣದ ಪರಿಸರದವರೆಗೆ ನಡೆಯಿತು.