ಹೂವಿನಹಡಗಲಿ: ನೈರ್ಮಲ್ಯ ಗ್ರಾಮಗಳ ನಿರ್ಮಾಣಕ್ಕಾಗಿ ಮೊದಲು ವ್ಯಕ್ತಿಗತ ಸ್ವಚ್ಛತೆ ಅಗತ್ಯ ಎಂದು ಜಿಪಂ ಯೋಜನಾ ನಿರ್ದೇಶಕ ಅಶೋಕ ತೋಟದ ಹೇಳಿದರು.
ಇದನ್ನೂ ಓದಿ: ತಹಸೀಲ್ದಾರ್ ಕಚೇರಿ ಸ್ವಚ್ಛತೆಗೆ ಗಡುವು
ಹಗರನೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಸ್ವಚ್ಛತಾ ಹೀ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆ ಹಾಗೂ ಸುತ್ತಲಿನ ಸ್ಥಳಗಳಲ್ಲಿ ಸ್ವಚ್ಛತೆ ಕಾಯ್ದುಕೊಂಡಾಗ ಆರೋಗ್ಯಯುತ ಜೀವನ ನಡೆಸಲು ಸಾಧ್ಯ.
ಶಾಲಾ ಸಮಯದಲ್ಲಿಯೇ ಶಿಕ್ಷಕರು ಹಾಗೂ ಅಧಿಕಾರಿಗಳು ಮಕ್ಕಳಿಗೆ ಸ್ವಚ್ಛತೆ ಮತ್ತು ಸ್ವಯಂ ಕೌಶಲ ಬಗ್ಗೆ ಅರಿವು ಮೂಡಿಸಬೇಕು. ಸ್ವ-ಸಹಾಯ ಸಂಘ ಸಂಸ್ಥೆಗಳ ಮೂಲಕ ಗ್ರಾಮಮಟ್ಟದಲ್ಲಿ ಆರೋಗ್ಯ ಹಾಗೂ ಇತರೆ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸಬೇಕು.
ಗ್ರಾಪಂಗಳಿಂದ ನಿತ್ಯ ಮನೆ ಬಾಗಿಲಿಗೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸಿ ವಿಲೇವಾರಿ ಮಾಡುವಂತೆ ಗ್ರಾಮಸ್ಥರಿಗೆ ತಿಳಿಸಬೇಕು ಎಂದರು.
ತಾಪಂ ಇಒ ಮೈನಹಳ್ಳಿ ಉಮೇಶ್ ಮಾತನಾಡಿ, ಗ್ರಾಮಗಳು ಪ್ರಗತಿ ಕಂಡರೆ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು. ಪಿಡಿಒ ಶಶಿಕಾಲ ಕೊಪ್ಪದ್, ಮುಖ್ಯಶಿಕ್ಷಕ ಎಂ.ಶ್ರೀಮಂತ್, ಶಿಕ್ಷಕರಾದ ರಮೇಶ್, ಗೋಪಿ, ಜಯಶ್ರೀ, ಎಸ್.ಆರ್.ವೀಣಾ ಇತರರಿದ್ದರು.