ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆಯಲ್ಲಿ ಶನಿವಾರ ಜರುಗಿದ್ದು, ಪಾರಿಜಾತ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ನಡೆದ ಮಾತಿನ ಚಕಮಕಿಯಿಂದ ಪರಿಸ್ಥಿತಿ ಕೆಲಕಾಲ ಬಿಗುಗೊಂಡಿತ್ತು.
ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ.ಅವರು, ಹಿಂದಿನ 56 ಸಭೆಗಳಲ್ಲಿ ಈ ಬಗ್ಗೆ ಸತತ ಪ್ರಸ್ತಾಪವಾಗುತ್ತಿದ್ದರೂ, ಇನ್ನೂ ನಿರ್ದಿಷ್ಟ ಬೆಳವಣಿಗೆ ಆಗಿಲ್ಲ. ಅಂಬೇಡ್ಕರ್ ಪ್ರತಿಮೆ ವಿಚಾರ ಪದೇ ಪದೆ ನಿರ್ಲಕ್ಷಿಸಲಾಗುತ್ತಿದೆ ಎಂದರು.
ದನಿಗೂಡಿಸಿದ ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಅವರು, ಅನೇಕ ಸಮಯದಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಆಡಳಿತ ಪಕ್ಷಕ್ಕೆ ಆಸಕ್ತಿ ಇಲ್ಲವೆಂಬುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಪುರಸಭೆ ಸದಸ್ಯ ಶ್ರೀಧರ್ ಶೇರೆಗಾರ್ ಸಹಿತ ನಾಮನಿರ್ದೇಶಿತ ಸದಸ್ಯರೂ ಅನುಮೋದಿಸಿದರು.
ವಿಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರಾದ ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ, ರಾವೇಂದ್ರ ಖಾರ್ವಿ, ರೋಹಿಣಿ ಅವರು, ಪ್ರತಿಮೆ ವಿಚಾರದಲ್ಲಿ ಅಡ್ಡಿಪಡಿಸುವ ಮೂಲಕ ತಡೆಯೊಡ್ಡುವುದು ನೀವು ಎನ್ನುವುದರೊಂದಿಗೆ ವಿಪಕ್ಷದ ಮೇಲೆ ಮುಗಿಬಿದ್ದರು. ಇದರಿಂದ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.
ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ ವಾತನಾಡಿ, ಅಂಬೇಡ್ಕರ್ ಬಗ್ಗೆ ಅಪಾರ ಗೌರವವಿದೆ. ಪ್ರತಿಮೆ ನಿರ್ವಾಣ ಇಷ್ಟವಿಲ್ಲ ಅನ್ನುವ ವಿಪಕ್ಷದ ಆರೋಪ ಸರಿಯಲ್ಲ. ಕಾನೂನು ತೊಡಕಿನಿಂದ ವಿಳಂಬವಾಗಿದೆ. ಈಗ ನಿರ್ಣಯ ಕೈಗೊಂಡು ಇದಕ್ಕೆ ಸಂಬಂಧಿಸಿ ಅಂದಾಜುಪಟ್ಟಿ ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸೋಣ ಎಂದರು.
ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಮುಖ್ಯಾಧಿಕಾರಿ ಆನಂದ ಜೆ., ಸದಸ್ಯರು, ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಎಸ್‌ಐ ನಂಜಾ ನಾಯ್ಕ ಮಾತನಾಡಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ಎಸ್‌ಪಿ ಅವರ ಸೂಚನೆಯಂತೆ ಪ್ರಮುಖ ಕಡೆಗಳಲ್ಲಿ ಶೀಘ್ರವೇ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಗಮ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಜಾಮ್, ಅಪಘಾತಗಳು ಆಗುತ್ತಿರುವ ಬಗ್ಗೆ ಸದಸ್ಯೆ ಪ್ರಭಾವತಿ ಪ್ರಸ್ತಾಪಿಸಿದ್ದು, ಕ್ರಮ ವಹಿಸುವುದಾಗಿ ಐಆರ್‌ಬಿಯವರು ಭರವಸೆ ನೀಡಿದರು. ಕುಂದಾಪುರ ನಗರದಲ್ಲಿ ಉಂಟಾಗಿರುವ ವಾಹನ ಪಾರ್ಕಿಂಗ್ ವಿಚಾರ ಮುನ್ನೆಲೆಗೆ ಬಂದಿದ್ದು, ಜಿಲ್ಲಾಧಿಕಾರಿಯಿಂದ ಸೂಚನೆ ಬಂದರೆ ಸಮಸ್ಯೆ ಕುರಿತು ಪರಿಶೀಲಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಕೆಲ ಸಮಯದ ಹಿಂದೆ ್ಲೈಓವರ್ ಅಡಿಯಲ್ಲಿ ಮಲಗುತ್ತಿದ್ದ ವಲಸೆ ಕಾರ್ಮಿಕರನ್ನು ಸ್ಥಳಾಂತರಿಸಿ ವಿಚಾರ ಮುನ್ನೆಲೆಗೆ ಬಂದಿದ್ದು, ಪಡುಬಿದ್ರಿಯಲ್ಲಿ ಕಾರ್ಮಿಕರ ವಸತಿ ಸಮುಚ್ಛಯ ನಿರ್ಮಾಣವಾಗಲಿದೆ. ಕುಂದಾಪುರ-ಬೈಂದೂರು ಭಾಗದಲ್ಲೂ ವಸತಿ ಸಮುಚ್ಛಯ ನಿರ್ವಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಕಾರ್ಮಿಕ ಇಲಾಖೆ ನಿರೀಕ್ಷಕರು ಮಾಹಿತಿ ನೀಡಿದರು.