ಜಿಲ್ಲೆ

ಕ್ಯಾಬ್ ಚಾಲಕನ ಜೊತೆ ನಟಿ ಸಂಜನಾ ಗಲ್ರಾನಿ ಕಿರಿಕ್​; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

Webdesk - Ravikanth

ಬೆಂಗಳೂರು: ಡ್ರಗ್ಸ್​ ಮಾರಾಟ ಜಾಲದಲ್ಲಿ ಸಿಲುಕಿ ಸುದ್ದಿಯಾಗಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೊಂದು ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಕ್ಯಾಬ್​ ಚಾಲಕರ ಜತೆ ಕಿರಿಕ್ ಮಾಡಿಕೊಂಡ ಸಂಜನಾ ಬಳಿಕ ಚಾಲಕರ ತೀವ್ರ ಅಸಮಾಧಾನಕ್ಕೂ ಗುರಿ ಆಗಬೇಕಾಗಿ ಬಂತು.

ಓಲಾ ಕ್ಯಾಬ್ ಚಾಲಕ ಸುಸೈ ಮಣಿ ಎಂಬವರು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇಲೆ ತನಿಖೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಚಿತ್ರೀಕರಣ ಸ್ಥಳಕ್ಕೆ ಹೋಗಲು ಸಂಜನಾ ಓಲಾ ಕ್ಯಾಬ್ ಬುಕ್ ಮಾಡಿದ್ದರು. ಇಂದಿರಾನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಬದಲಿಗೆ ರಾಜರಾಜೇಶ್ವರಿನಗರಕ್ಕೆ ಬುಕ್ ಮಾಡಿದ್ದರು. ಓಲಾ ಚಾಲಕ, ಸಂಜನಾ ಹೇಳಿದ ಮೇಲೆ ಓಲಾ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಲೋಕೇಶನ್ ಬದಲಾಯಿಸುವಂತೆ ಹೇಳಿದ್ದ. ಆದರೆ, ಲೋಕೇಶನ್ ಬದಲಾಗಿಲ್ಲ. ಈ ವಿಚಾರವಾಗಿ ಚಾಲಕ ಮತ್ತು ಸಂಜನಾ ನಡುವೆ ಜಟಾಪಟಿ ಶುರುವಾಗಿತ್ತು. ಇಬ್ಬರ ನಡುವೆ ವಾಗ್ವಾದ ನಡೆದು ಸಂಜನಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಎ.ಸಿ. ಆನ್ ಮಾಡುವಂತೆ ಕೇಳಿದರು. ಆನ್ ಮಾಡಿದ ಮೇಲೂ ಅನಗತ್ಯವಾಗಿ ತೊಂದರೆ ಕೊಟ್ಟು ನಿಂದಿಸಿದರು ಎಂದು ಚಾಲಕ ವಿಡಿಯೋ ಸಮೇತ ದೂರು ನೀಡಿದ್ದಾರೆ. ದೂರು ಸ್ವೀಕರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ವೀಟ್‌ನಲ್ಲಿ ಸಂಜನಾ ಆಕ್ರೋಶ: ಈ ಘಟನೆಯನ್ನು ನಟಿ ಸಂಜನಾ ಟ್ವೀಟ್ ಮಾಡಿ ಓಲಾ ಕ್ಯಾಬ್ ನಂಬರ್ ಮತ್ತು ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎ.ಸಿ. ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಚಾಲಕ ಉಡಾಫೆ ಉತ್ತರ ನೀಡಿದರು. ಕ್ಯಾಬ್‌ನ ಕಿಟಕಿ ಸಹ ಸರಿಯಾಗಿ ಇರಲಿಲ್ಲ. ಪೂರ್ಣ ಪ್ರಯಾಣದ ಹಣ ನೀಡಿದರೂ ಇಂತಹ ಕಾರನ್ನು ಏಕೆ ಒದಗಿಸುತ್ತೀರಿ? ಎಂದು ಓಲಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದೆ.

ಕೊನೆಗೂ ರಾಜಿ: ಸಂಜನಾ ಹಾಗೂ ಚಾಲಕ ಇಬ್ಬರನ್ನೂ ಠಾಣೆಗೆ ಕರೆಸಿರುವ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಕಳಿಸಿದ್ದರಿಂದ ಪ್ರಕರಣ ಸದ್ಯ ರಾಜಿಯಲ್ಲಿ ಇತ್ಯರ್ಥಗೊಂಡಿದೆ.