ಜಿಲ್ಲೆ

ಮಣಿಪುರ ಹಿಂಸಾಚಾರ ಖಂಡಿಸಿ ಕ್ರಿಶ್ಚಿಯನ್ನರ ಬೃಹತ್ ಪ್ರತಿಭಟನೆ

Uttara Kannada - Subash Hegde

ಕಾರವಾರ:ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಕಾರವಾರ, ಅಂಕೋಲಾ ಕ್ರಿಶ್ಚಿಯನ್ ಫೋರಂನಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಮಿತ್ರ ಸಮಾಜ ಮೈದಾನದಲ್ಲಿ ಸೇರಿದ ಸಾವಿರಾರು ಕ್ರಿಶ್ಚಿಯನ್ ಬಾಂಧವರು ಕೈಗೆ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ರಾಜು ಮಿಗವೀರ ಅವರ ಮೂಲಕ ಸಲ್ಲಿಸಿದರು.


ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಉತ್ತರ ಕನ್ನಡ ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಆಡಳಿತಾಧಿಕಾರಿ, ಬಿಷಪ್ ಡಾ.ಡೆರಿಕ್ ಫರ್ನಾಂಡಿಸ್, ಮಣಿಪುರದಲ್ಲಿ ಕಳೆದ ಮೂರು ತಿಂಗಳಲ್ಲಿ ಅನೇಕ ರೀತಿಯ ಅತ್ಯಾಚಾರ, ಹಿಂಸಾಚಾರಗಳಾಗಿವೆ. ಅದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಶ್ರಧ್ದಾ ಸ್ಥಳಗಳಿಗೆ ಧಕ್ಕೆಯಾಗಿದೆ. ಇದಕ್ಕೆಲ್ಲ ಸರ್ಕಾರ ಕ್ರಮ ವಹಿಸಬೇಕು ಎಂದರು.
ಸೇಂಟ್ ಜೋಸೆಪ್ ಕಾಲೇಜ್ ನ ಫಾದರ್ ಸ್ಟ್ಯಾನಿ ಪಿಂಟೋ, ಇದು ಇಬ್ಬರು ಮಹಿಳೆಯರ ಮೇಲೆ ನಡೆದ ದೌರ್ಜನ್ಯವಲ್ಲ. ಭಾರತ ಸ್ವಭಿಮಾನಕ್ಕೆ, ಭಾರತ ಮಾತೆಗೆ ಆದ ಅವಮಾನವಾಗಿದೆ. ಅದನ್ನು ತಡೆಯದೇ ಆಡಳಿತ ಸುಮ್ಮನಿರುವುದು ಅಚ್ಚರಿ ತಂದಿದೆ. ಪ್ರಜಾಪ್ರಭುತ್ವದ ಮೇಲಿನ ದೌರ್ಜನ್ಯವಾಗಿದೆ. ಇಂದು ಮಣಿಪುರದಲ್ಲಿ ಆಗಿದ್ದು, ನಾಳೆ ಕಾರವಾರದಲ್ಲಿ ಸಂಭವಿಸಬಹುದು ಎಂದರು.
ಫಾದರ್ ಗಳಾದ ವೆಲರಿನ್ ಸಿಕ್ವೆರಾ, ಸೈಮನ್ ಟೆಲ್ಲಿಸ್, ಸಮಾಜದ ಪ್ರಮುಖರಾದ ಸ್ಯಾಮ್ಸನ್ ಡಿಸೋಜಾ, ಲಿಯೋ ಲೂಯೀಸ್ ಇತರರು ಇದ್ದರು.

ನಾವು ಮಣಿಪುರದಿಂದ ಇಲ್ಲಿ ಬಂದು ನರ್ಸಿಂಗ್ ಕಲಿಯುತ್ತಿದ್ದೇವೆ. ಆದರೆ, ನಮಗೆ ನಮ್ಮ ತಾಯಿ ನಾಡಿನದ್ದೇ ಚಿಂತೆಯಾಗಿದೆ. ದಿನವೂ ನಾನು ಪತ್ರಿಕೆಗಳಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಪತ್ರಿಕೆಯಲ್ಲಿ ಓದುತ್ತೇನೆ. ನನ್ನ ಪಾಲಕರಿಗೆ ಕರೆ ಮಾಡಿ, ಅವರು ಸುರಕ್ಷಿತವಾಗಿರುವ ಬಗ್ಗೆ ಕೇಳುತ್ತೇನೆ. ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸರ್ಕಾರ ಕ್ರಮ ವಹಿಸಬೇಕು.ಕಿಮ್ ಮಣಿಪುರ ಮೂಲದಹೊನ್ನಾವರ ಸೇಂಟ್ ಇಗ್ನೇಶಿಯಸ್ ನರ್ಸಿಂಗ್ ವಿದ್ಯಾರ್ಥಿನಿ.