ಚಿತ್ರದುರ್ಗದಲ್ಲಿ ಸಂಭವಿಸಿದ ಬಸ್ ದುರಂತ
- ಚಿತ್ರದುರ್ಗದಲ್ಲಿ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ
- ಪ್ರಯಾಣಿಕರೆಲ್ಲರು ಗಾಢ ನಿದ್ರೆಯಲ್ಲಿರುವಾಗಲೇ ಘಟಿಸಿದ ಘೋರ ದುರಂತ
- 5ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದರೆ ಎಂಬ ಮಾಹಿತಿ
- ಸಾವಿನ ದವಡೆಯಿಂದ ಪಾರಾದಂತಹ ಭಯಾನಕ ಅನುಭವನ್ನು ಹಂಚಿಕೊಂಡ ಟೆಕ್ಕಿ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನ ಹಳ್ಳಿ ಎಚ್ಪಿ ಪೆಟ್ರೋಲ್ ಬಂಕ್ ಬಳಿ ಇಂದು (ಡಿ.25) ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತ ( Chitradurga Bus Accident ) ಸಂಭವಿಸಿ, 5ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದರೆ. ಪ್ರಯಾಣಿಕರೆಲ್ಲರು ಗಾಢ ನಿದ್ರೆಯಲ್ಲಿರುವಾಗಲೇ ಇಂಥದ್ದೊಂದು ಘೋರ ದುರಂತ ಘಟಿಸಿ ಹೋಗಿದೆ. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಇದರ ನಡುವೆ ಪವಾಡವೆಂಬಂತೆ ಕೆಲ ಪ್ರಯಾಣಿಕರು ಬೆಂಕಿಯ ಕೆನ್ನಾಲಿಗೆಯಿಂದ ಬಚಾವ್ ಆಗಿದ್ದಾರೆ. ಸಾವಿನ ದವಡೆಯಿಂದ ಪಾರಾದಂತಹ ಭಯಾನಕ ಅನುಭವನ್ನು ಹಂಚಿಕೊಳ್ಳುತ್ತಿದ್ದಾರೆ.
ಟೆಕ್ಕಿ ವರುಣ್ ಎಂಬುವರು ಕೇವಲ 40 ಸೆಕೆಂಡ್ನಲ್ಲಿ ಪ್ರಾಣ ಉಳಿಸಿಕೊಂಡಿದ್ದಾಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಅವಘಡ ಸಂಭವಿಸುತ್ತಿದಂತೆ ಕಿಟಕಿ ಗಾಜನ್ನು ಹೊಡೆದು, ಅಲ್ಲಿಂದ ಹೊರಗೆ ಹಾರುವ ಮೂಲಕ ಬಚಾವ್ ಆಗಿದ್ದಾಗಿ ಹೇಳಿದ್ದಾರೆ.
ಈ ಘಟನೆ ತಡರಾತ್ರಿ 2 ಗಂಟೆಗೆ ಸಂಭವಿಸಿತು. ಆ ಸಮಯದಲ್ಲಿ ನಾವೆಲ್ಲ ಗಾಢ ನಿದ್ರೆಯಲ್ಲಿ ಇದ್ದೆವು. ನನಗೆ ಬಸ್ ಮಿಸ್ ಆಗಿದ್ದರಿಂದ ನಾನು ಆ ಬಸ್ಸಿಗೆ ಹೋದೆ. ಅಪಘಾತ ನಡೆದು ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಕಾಲಿನಲ್ಲೇ ಗ್ಲಾಸ್ ಅನ್ನು ಹೊಡೆದು ಹಾಕಿ, ಅಲ್ಲಿಂದ ಹೊರಗೆ ಜಂಪ್ ಮಾಡಿದೆವು. ನನ್ನ ಜತೆಯಲ್ಲಿ ಇನ್ನೂ ಒಬ್ಬರು ಇದ್ದರು. ಅವರನ್ನು ಕೂಡ ಹೊರಗೆ ಜಂಪ್ ಮಾಡಿಸಿದೆ. ಈ ಘಟನೆ ನಡೆದ ಒಂದೂವರೆ ಗಂಟೆಯ ಬಳಿಕ ಆಂಬ್ಯುಲೆನ್ಸ್ ಬಂತು. ಅದಕ್ಕೂ ಮುನ್ನವೇ ಅಗ್ನಿಶಾಮಕ ವಾಹನ ಬಂದಿತ್ತು. ಆಂಬ್ಯುಲೆನ್ಸ್ ತಡವಾಗಿ ಬಂದಿದ್ದೇ ಪ್ರಮುಖ ಸಮಸ್ಯೆಯಾಯಿತು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಕರೆ ಮಾಡಿದರೂ ಸಕಾಲಕ್ಕೆ ಬರಲಿಲ್ಲ ಎಂದು ವರುಣ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದು. ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಪತ್ತೆಹಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ತೀವ್ರ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ, ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50,000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಇಲ್ಲಿಯವರೆಗೆ ಒಟ್ಟು 5 ಮಂದಿ ಮೃತ
ಆರಂಭದಲ್ಲಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 17 ಎನ್ನಲಾಗಿತ್ತು. ಆದರೆ, ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾದಾಗ ಸಂಖ್ಯೆಯಲ್ಲಿ ಬದಲಾವಣೆಗೊಂಡಿತು. ಇತ್ತೀಚಿನ ವರದಿಗಳ ಪ್ರಕಾರ, ಲಾರಿ ಚಾಲಕ ಸೇರಿ ಐವರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಇನ್ನೂ ಹಲವರ ಮೃತದೇಹ ಸಿಕ್ಕಿದ್ದೇ ಆದರೂ ಗುರುತು ಪತ್ತೆಯಾಗಬೇಕಿದೆ. ಮೂವರು ನಾಪತ್ತೆ ಎನ್ನಲಾಗಿದ್ದು, ಅವರ ಬಗ್ಗೆಯೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.