ಬೆಳಗಾವಿ: ತಂದೆ ತೋಡಿಸಿದ್ದ ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ಕಂದಮ್ಮಗಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಗೋಕಾಕ್ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಭಾಗವ್ವ ಜಕ್ಕನ್ನವರ್(6), ಸುಪ್ರಿತ್ ಜಕ್ಕನ್ನವರ್(5), ಮಾಳಪ್ಪ ಜಕ್ಕನ್ನವರ್(4) ಹಾಗೂ ರಾಧಿಕಾ ಜಕ್ಕನ್ನವರ್(3) ಮೃತ ಮಕ್ಕಳು.
ಕರೆಪ್ಪ ಮತ್ತು ಮಹಾದೇವಿ ದಂಪತಿಯ ಮಕ್ಕಳಾಗಿದ್ದು, ನೀರಿನಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ಜಾರಿ ಒಬ್ಬರ ಮೇಲೊಬ್ಬರು ಬಿದ್ದು ಸಾವಿಗೀಡಾಗಿದ್ದಾರೆ. ಮಕ್ಕಳ ಸಾವು ಇಡೀ ಗ್ರಾಮಸ್ಥರ ಮನಕಲಕಿದ್ದು, ನೀರವ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)