ತಾಳುಬೆಟ್ಟದಲ್ಲಿ ಭಕ್ತರ ಬಳಿ ಭಿಕ್ಷೆ ಕೇಳಿ ಪಡೆಯುತ್ತಿರುವ ಮಕ್ಕಳು 
ಜಿಲ್ಲೆ

ಶಾಲೆಯಿಂದ ಮಕ್ಕಳು ದೂರ, ಭಿಕ್ಷಾಟನೆಗೆ ತಳ್ಳಿದ ಪಾಲಕರು!; ಸರ್ಕಾರಿ ಶಾಲೆಗಳಲ್ಲಿ ಸಿಗದ ಆನ್​ಲೈನ್ ಪಾಠ

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಡಿಜಿಟಲ್ ಶಿಕ್ಷಣ ಸೃಷ್ಟಿಸಿರುವ ಅಸಮಾನತೆ

| ಕಿರಣ್ ಮಾದರಹಳ್ಳಿ ಚಾಮರಾಜನಗರ

ಜಿಲ್ಲೆಯ ಕಾಡಂಚಿನ ಕುಗ್ರಾಮಗಳಲ್ಲಿ ಕರೊನಾ ಕಾಲಘಟ್ಟದ ಡಿಜಿಟಲ್- ನಾನ್ ಡಿಜಿಟಲ್ ಶಿಕ್ಷಣ ಸೃಷ್ಟಿಸಿರುವ ಅಸಮಾನತೆ ಬಡವರ ಮಕ್ಕಳನ್ನು ಭಿಕ್ಷಾಟನೆಗಿಳಿಸಿದೆ. ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ತಳದಲ್ಲಿರುವ ತಾಳುಬೆಟ್ಟದಲ್ಲಿ ಧೂಪ, ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಪಾಲಕರ ಮಕ್ಕಳು ಭಕ್ತರ ಮುಂದೆ ಹಣಕ್ಕೆ ಕೈಚಾಚಿ ನಿಲ್ಲುತ್ತಿವೆ.

‘ಇಸ್ಕೂಲ್ ಬಾಗ್ಲು ತೆಗ್ದಿಲ್ಲ, ಮನೇಲಿ ಮಕ್ಳುನ ಒಬ್ರುನ್ನೆ ಬುಡಕ್ಕಾಗ್ದೆ ಜೊತ್ಗೆ ಕರ್ಕಂಡು ಬಂದಿವಿ..’ ಎನ್ನುವ ಪಾಲಕರು, ತಮ್ಮ ಕೆಲಸಗಳಲ್ಲಿ ತಾವು ತೊಡಗಿಕೊಳ್ಳುತ್ತಿದ್ದಾರೆ. ಅವರ ಜತೆ ಬರುವ 15ಕ್ಕೂ ಹೆಚ್ಚು ಮಕ್ಕಳು ಭಕ್ತರ ಬಳಿ ತಿಂಡಿ-ಊಟಕ್ಕಾಗಿ ಹಣ ಕೇಳತೊಡಗುತ್ತಾರೆ. ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ. ಈ ನಡುವೆ, ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಭಕ್ತರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಭಿಕ್ಷೆ ಕೇಳಲು ಇವರ ಸಂಪರ್ಕ ಬೆಳೆಸುತ್ತಿರುವ ಮಕ್ಕಳು ಮಾಸ್ಕ್ ಅನ್ನೂ ಧರಿಸುತ್ತಿಲ್ಲ. ಶಿಕ್ಷಣ ಪಡೆದು ದೇಶದ ಭವಿಷ್ಯ ರೂಪಿಸಬೇಕಾದ ಕೈಗಳು ಭಿಕ್ಷೆಗಾಗಿ ಕೈಯೊಡ್ಡಿ ನಿಲ್ಲುವಂತಾಗಿದೆ.

ಲಾಕ್​ಡೌನ್, ಕರ್ಫ್ಯೂ ವೇಳೆ ದೇವಸ್ಥಾನ ಬಂದ್ ಆಗಿ ಧೂಪ-ದೀಪ ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಲವು ಪಾಲಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರಲಾಗದೆ ಜತೆಗೆ ಕರೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇವರ ಬಳಿ ಆನ್​ಲೈನ್ ಶಿಕ್ಷಣ ಕೊಡಿಸಲು ಮೊಬೈಲ್ ಹಾಗೂ ಕರೆನ್ಸಿ ಹಾಕಿಸಲು ಹಣವಿಲ್ಲ. ಮಾರ್ಗದರ್ಶನ ನೀಡುವವರೂ ಇಲ್ಲ!

ಮಹದೇಶ್ವರ ಬೆಟ್ಟ ಇರುವ ಹನೂರು ತಾಲೂಕು ವ್ಯಾಪ್ತಿಯಲ್ಲಿ ಈ ವರ್ಷ 936 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕಳೆದ ವರ್ಷ 24,703 ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರು. ಈ ಬಾರಿ ಕೆಲವು ಮಕ್ಕಳು ಶಾಲೆಗಳಿಂದ ವರ್ಗಾವಣೆ ಪತ್ರ ಪಡೆದಿದ್ದು, ಬೇರೆ ಶಾಲೆಗಳಿಗೆ ಸೇರಿಲ್ಲ. ಶಿಕ್ಷಣ ಇಲಾಖೆ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸುವ ಕೆಲಸ ನಡೆಸಿದೆ. ‘ತಾಳುಬೆಟ್ಟದಲ್ಲಿ ಮಕ್ಕಳು ಧೂಪ ಮಾರುತ್ತಿರುವ ಬಗ್ಗೆ ಸಹಾಯವಾಣಿಗೆ ದೂರು ಬಂದಿದ್ದು, ಮುಂದಿನ ವಾರ ಸ್ಥಳಕ್ಕೆ ತೆರಳಿ ಪಾಲಕರು ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳಬಾರದೆಂದು ಅರಿವು ಮೂಡಿಸಲಾಗುವುದು’ ಎಂದು ಬಾಲಕಾರ್ವಿುಕ ಯೋಜನಾ ಸೊಸೈಟಿ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

ಶಾಲೆ ಪುನರಾರಂಭವಾಗಿಲ್ಲವೆಂದು ತಾಳುಬೆಟ್ಟದಲ್ಲಿ ಪೂಜಾ ಸಾಮಗ್ರಿ ಮಾರುವವರು ಮಕ್ಕಳನ್ನು ಜತೆಗೆ ಕರೆದುಹೋಡು ಹೋಗಿ ಭಿಕ್ಷಾಟನೆಗಿಳಿಸಿದ್ದಾರೆ. ಅವರನ್ನು ರಾಮಾಪುರ ಪೊಲೀಸ್ ಠಾಣೆಗೆ ಕರೆತಂದು ದೂರು ಸಹ ನೀಡಿದ್ದೇವೆ. ಆದರೂ ಭಿಕ್ಷೆ ಬೇಡುವುದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.| ಟಿ.ಆರ್.ಸ್ವಾಮಿ ಬಿಇಒ, ಹನೂರುಪಾಲಕರು ಮಕ್ಕಳನ್ನು ಭಿಕ್ಷಾಟನೆಗೆ ಬಿಡಬಾರದು. ಇಂತಹ ಮಕ್ಕಳನ್ನು ರಕ್ಷಿಸಿ ಬಾಲಮಂದಿರಕ್ಕೆ ಕರೆತಂದು ಬಿಡಲಾಗುವುದು. ಅವರಿಗೆ ಸರ್ಕಾರದಿಂದ ಶಿಕ್ಷಣವನ್ನೂ ಕೊಡಿಸಲಾಗುವುದು.| ಗೋವಿಂದರಾಜು ಪ್ರಭಾರ ಮಕ್ಕಳ ರಕ್ಷಣಾಧಿಕಾರಿ, ಚಾಮರಾಜನಗರ